ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ – ಕಹಳೆ ನ್ಯೂಸ್
ಯಾದಗಿರಿ: ಯಾದಗಿರಿ ನಗರದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ (Parashuram) ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ದಲಿತ ಸಂಘಟನೆಗಳು ಆಗ್ರಹಿಸಿವೆ. ಅಷ್ಟೇ ಅಲ್ಲದೇ ಪರಶುರಾಮ್ ಸಾವಿಗೆ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ (Channa Reddy Patel) ಮತ್ತು ಪುತ್ರ ಸನ್ನಿಗೌಡ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಕುಟುಂಬಸ್ಥರ ಆರೋಪ ಏನು?
ಪೋಸ್ಟಿಂಗ್‌ಗಾಗಿ ಲಕ್ಷ ಲಕ್ಷ ಹಣಕ್ಕೆ ಯಾದಗಿರಿ ಕಾಂಗ್ರೆಸ್ ಶಾಸಕ (Congress MLA) ಚೆನ್ನಾರೆಡ್ಡಿ ಪಾಟೀಲ್ ಬೇಡಿಕೆ ಇಟ್ಟಿದ್ದರು. ಈಗ ನಿಯಮಬಾಹಿರವಾಗಿ ಅವರನ್ನು ವರ್ಗಾವಣೆ ಮಾಡಿದ್ದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಭಾರೀ ಒತ್ತಡದಿಂದ ಅವರಿಗೆ ಹೃದಯಾಘಾತವಾಗಿದೆ. ಯಾದಗಿರಿ ಶಾಸಕರಿಗೆ ಹಣದ ಆಸೆ ಬಹಳಷ್ಟಿದೆ. ಪರಶುರಾಮ್ ಅವರ ಜಾಗಕ್ಕೆ ಬೇರೊಬ್ಬರು ಬಂದರೂ ವರ್ಗಾವಣೆ ಪಟ್ಟಿಯಲ್ಲಿ ಪರಶುರಾಮ್ ಹೆಸರೇ ಇರಲಿಲ್ಲ. ಈಗ ಹೊಸದಾಗಿ ಬಂದವರು ಹಣ ನೀಡಿಯೇ ಬಂದಿದ್ದಾರೆ ಎಂದು ಮಾವ ವೆಂಕಟಸ್ವಾಮಿ ಮತ್ತು ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ.
ಪರಶುರಾಮ್ ಅವರು ಪಿಎಸ್‌ಐ ಹುದ್ದೆ ಪಡೆಯಲು 30 ಲಕ್ಷ ರೂ. ನೀಡಿದ್ದರು. ಈ ಹುದ್ದೆ ಪಡೆಯಲು ಬಹಳ ಸಾಲ ಮಾಡಿದ್ದರು. ಈಗ ಮತ್ತೆ ನಿಯಮಬಾಹಿರವಾಗಿ ಒಂದು ವರ್ಷ ಪೂರೈಸುವ ಮುನ್ನವೇ ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ್ದರಿಂದ ಖಿನ್ನತೆಗೆ ಜಾರಿದ್ದರು. ಈ ಕಾರಣದಿಂದ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.
ಕಾರ್ಯಕರ್ತರ ಪ್ರತಿಭಟನೆ:
ಪಿಎಸ್‌ಐ ಪರಶುರಾಮ್ ಮೃತಪಟ್ಟ ಹಿನ್ನೆಲೆಯಲ್ಲಿ ಯಾದಗಿರಿಯ ದಲಿತ ಸಂಘಟನೆಗಳು ರಾತ್ರಿಯೇ ಪ್ರತಿಭಟನೆ ನಡೆಸಿವೆ. ನಗರದ ಖಾಸಗಿ ಆಸ್ಪತ್ರೆ ಬಳಿ ಜಮಾಯಿಸಿದ ವಿವಿಧ ಸಂಘಟನೆಯ ಕಾರ್ಯಕರ್ತರು ಅಂಬುಲೆನ್ಸ್ ತಡೆದು ಪ್ರತಿಭಟಿಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಅಂಬುಲೆನ್ಸ್‌ನಲ್ಲಿ ರವಾನೆ ಮಾಡಲಾಗುತ್ತಿತ್ತು. ಈ ವೇಳೆ ಆಂಬುಲೆನ್ಸ್ ತಡೆದು ಪ್ರತಿಭಟಿಸಿದ್ದಾರೆ. ಉತ್ತಮ ಕೆಲಸದಿಂದ ಪರಶುರಾಮ್ ಅವರು ಹೆಸರು ಪಡೆದಿದ್ದರು. ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಏನಿದು ಪ್ರಕರಣ?
ಒಂದು ವರ್ಷದ ಹಿಂದೆ ಯಾದಗಿರಿ ನಗರದ ಪಿಎಸ್‌ಐ ಆಗಿ ಪರಶುರಾಮ್ (35) ಅಧಿಕಾರ ಸ್ವೀಕರಿಸಿದ್ದರು. ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾದ ಕಾರಣ ಗುರುವಾರ ಅವರನ್ನು ಪೊಲೀಸ್ ಸಿಬ್ಬಂದಿ ಬೀಳ್ಕೊಟ್ಟಿದ್ದರು. ಶುಕ್ರವಾರ ರಾತ್ರಿ 8 ಗಂಟೆಯ ವೇಳೆಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.