Saturday, September 21, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ನಗರ ಪೊಲೀಸ್ ಠಾಣೆ ಹಾಗೂ ಪುತ್ತೂರು ಉಮೇಶ್ ನಾಯಕ್ ನೇತೃತ್ವದಲ್ಲಿ ‘ಡೆಲ್ಲಿ ಬಾಬು’ ರಕ್ಷಣೆ ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆ- ಕಹಳೆ ನ್ಯೂಸ್

ಪುತ್ತೂರು, ಕಳೆದ ಒಂದು ವಾರದಿಂದ ಪುತ್ತೂರಿನ ಮುರ ಜಂಕ್ಷನ್ ಬಳಿಯ ಹೋಟೆಲ್ ನ್ಯೂ ವಿಶಾಲ್ ಪಕ್ಕದಲ್ಲಿ ಅನಾಥ ಹಾಗೂ ಅಸಹಾಯಕ ಸ್ಥಿತಿಯಲ್ಲಿ ವಾಸವಿದ್ದು, ಇಲ್ಲೇ ಮಲಮೂತ್ರ ವಿಸರ್ಜನೆ ಮಾಡಿ ಪರಿಸರವನ್ನು ಮಾಲಿನ್ಯ ಮಾಡುತ್ತಿದ್ದ ಸುಮಾರು 70 ವರ್ಷ ವಯೋಮಾನದ ‘ಬಾಬು’ ಎಂಬವರನ್ನು ಸ್ಥಳೀಯರ ದೂರಿನ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ವಸಂತಗೌಡ ಎನ್ ಹಾಗೂ ರೋಟರಿ ಕ್ಲಬ್ ಪುತ್ತೂರು ಇದರ ಮಾಜಿ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಮಂಗಳೂರಿನ ಲಲಿತ ಗೀತಾ ವೃದ್ಧಾಶ್ರಮಕ್ಕೆ ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಸಹಕಾರದೊಂದಿಗೆ ಸೇರಿಸಲಾಯಿತು. ಈ ಸಂದರ್ಭದಲ್ಲಿ ಆಶ್ರಮಕ್ಕೆ ಒಂದು ತಿಂಗಳಿಗೆ ಬೇಕಾದ ದಿನಸಿ ವಸ್ತುಗಳನ್ನು ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನ ಮುಖ್ಯರಸ್ತೆಯಲ್ಲಿ ಇದ್ದ ದಿನಸಿ ಹಾಗೂ ಇನ್ನಿತರ ಅಂಗಡಿಗಳಿಗೆ ಲಾರಿಯಲ್ಲಿ ಬರುವ ಸಾಮಗ್ರಿಗಳನ್ನು ಅಂಗಡಿ ಮಾಲೀಕರ ಅಂಗಡಿಗೆ ಸಾಗಿಸುವ ಕಾಯಕ ಮಾಡಿ ಬರುತ್ತಿರುವ ‘ಬಾಬು’ ಎಂಬ ಹೆಸರಿನ ಇವರು ಅನಾಥ ನಿರ್ಗತಿಕರ ವ್ಯಕ್ತಿ. ಇವರು ಬಹಳ ವರ್ಷದ ಹಿಂದೆ ಡೆಲ್ಲಿಯಲ್ಲಿ ನಡೆದ ರಾಷ್ಟ್ರೀಯ ಪಕ್ಷ ಒಂದರ ಪ್ರತಿಭಟನಾ ರ್ಯಾಲಿಯಲ್ಲಿ ಪುತ್ತೂರಿನ ಕಾರ್ಯಕರ್ತರ ಜೊತೆ ಹೋಗಿದ್ದರು ಮಾತ್ರವಲ್ಲದೆ ಡೆಲ್ಲಿಯಿಂದ ಹಿಂತಿರುಗಿ ಬರುವಾಗ ಹಿಂದಿ ಭಾಷೆಯನ್ನು ಕೂಡ ಅಲ್ಪಸ್ವಲ್ಪ ಮಟ್ಟಿಗೆ ಕಲಿತಿದ್ದರು ಈ ಕಾರಣಗಳಿಂದ ಇವರು ‘ಡೆಲ್ಲಿ ಬಾಬು’ ಎಂದೇ ಚಿರಪರಿಚಿತರಾಗಿದ್ದರು.

ಜಾಹೀರಾತು

ಕಳೆದ ಏಪ್ರಿಲ್ 2024ರಂದು ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪುತ್ತೂರು ನಗರ ಸಭೆಯ ಸಹಯೋಗದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಪುತ್ತೂರಿನಿಂದ 12 ಮಂದಿ ನಿರ್ಗತಿಕರನ್ನು ರಕ್ಷಣೆ ಮಾಡಿ ಪುತ್ತೂರಿನ ಕೆರೆಮುಲೆ ಎಂಬಲ್ಲಿರುವ ದೀಪಶ್ರೀ ವೃದ್ದಾಶ್ರಮಕ್ಕೆ ಸೇರಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಡೆಲ್ಲಿ ಬಾಬು ಅವರನ್ನು ಕೂಡ ರಕ್ಷಣೆ ಮಾಡಿಲಾಗಿತ್ತು ಆದರೆ, ಅವರು ಆಶ್ರಮದಲ್ಲಿ ಜಗಳ ಮಾಡಿ ಎರಡೇ ದಿನಗಳಲ್ಲಿ ಅಲ್ಲಿಂದ ತಪ್ಪಿಸಿ ಓಡಿ ಬಂದಿದ್ದರು.

ಕಳೆದ ಒಂದು ವಾರದಿಂದ ಅಸಹಾಯಕ ಸ್ಥಿತಿಯಲ್ಲಿದ್ದ ಡೆಲ್ಲಿ ಬಾಬು ಅವರನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ ಸಂತೋಷದಲ್ಲಿ ಮುರದ ನ್ಯೂ ವಿಶಾಲ್ ಹೋಟೆಲ್ ಅವರಿಂದ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲರಿಗೂ ವಿಶೇಷ ಆತಿಥ್ಯ ನೀಡಲಾಯಿತು.

ಈ ಕಾರ್ಯಾಚರಣೆಯಲ್ಲಿ ಪುತ್ತೂರು ನಗರ ಕಾನ್ಸ್ಟೇಬಲ್ ಶಿವರಾಜ್ ಕೆ ಜೆ, ಹಾಗೂ ಕಬಕ ಗ್ರಾಮ ಪಂಚಾಯಿತ್ ಪಿಡಿಒ ಶ್ರೀಮತಿ ಆಶಾ ಇ ಹಾಗೂ ಪಂಚಾಯತ್ ಸಿಬ್ಬಂದಿ ಶ್ರೀಮತಿ ಅನುರಾಧ ಅವರು ಹಾಗೂ ಸ್ಥಳೀಯರು ಸಹಕರಿಸಿದರು. ಮಂಗಳೂರಿನ ಆಶ್ರಮಕ್ಕೆ ಸೇರಿಸುವ ಸಮಯದಲ್ಲಿ ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಇದರ ಅಧ್ಯಕ್ಷರಾದ ಛಾಯಾ ಕಾಮತ್,ಕ್ಲಬ್ ಸರ್ವಿಸ್ ಡೈರೆಕ್ಟರ್ ಗೌರಿ ಶೆಣೈ, ಸದಸ್ಯರಾದ ಸ್ವಪ್ನ ಕಾಮತ್ ಹಾಗೂ ಅಶ್ವಿನಿ ಕಾಮತ್ ಸಹಕರಿಸಿದರು. ವಾಹನ ಸಾಗಾಟದಲ್ಲಿ ಆದರ್ಶ ಆಸ್ಪತ್ರೆ ಆಂಬುಲೆನ್ಸ್ ಚಾಲಕರಾದ ತಾರಾನಾಥ್ ಅವರು ಸಹಕರಿಸಿದರು.