ಕಾಪು ತಾಲ್ಲೂಕಿನ ಪಡುಬಿದ್ರಿಯ ನಂದಿಕೂರು ಗ್ರಾಮದ ಕೃಷ್ಣಯ್ಯ ಆಚಾರ್ಯರಿಗೆ 82 ವರ್ಷ, ಮದುವೆಯಿಲ್ಲ. ಹೆಂಡತಿ, ಮಕ್ಕಳು ಯಾರೂ ಇಲ್ಲ. ಇದ್ದ ಒಬ್ಬ ತಂಗಿಯೂ ತೀರಿ ಹೋದಳು.
ವೃದ್ಧಾಪ್ಯ ವೇತನದಿಂದ ಜೀವಿಸ್ತಾ ಇದ್ದ. ಜೊತೆಗೆ ಊರಿನವರು ಅಷ್ಟು, ಇಷ್ಟು ಸಹಾಯ ಮಾಡ್ತಿದ್ರು, ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳೂ ಆಗಾಗ ಸಹಾಯ ಮಾಡ್ತಿದ್ರು.
ವೃದ್ಧನಿಗೆ ಮನೆ ಬಗ್ಗೆ ಸೆಂಟಿಮೆಂಟು_
ಆದರೆ ಅವರು ವಾಸಿಸ್ತಾ ಇದ್ದ ಆ ಮಣ್ಣಿನ ಮನೆ ಬಹಳ ಶಿಥಿಲವಾಗಿತ್ತು. ಒಂದು ಭಾಗದ ಮಣ್ಣಿನ ಗೋಡೆ ಭಾಗಶಃ ಹಾನಿಗೊಳಗಾಗಿತ್ತು. ಮಣ್ಣಿನ ಗೋಡೆಗಳ ಆ ಮನೆ ಈ ರಣಮಳೆಗೆ ಖಂಡಿತ ಬೀಳುತ್ತೆ ಅನ್ನುವಂತಿತ್ತು.
ಆದರೆ ಕೃಷ್ಣಯ್ಯರಿಗೆ ಮನೆ ಬಗ್ಗೆ ಬಹಳ ಸೆಂಟಿಮೆಂಟ್. ಎಷ್ಟೇ ಹಳೆಯದಾದರೂ ಎಷ್ಟೇ ಬೀಳುವಂತಿದ್ದರೂ ಅದನ್ನು ಬಿಟ್ಟು ಬೇರೆ ಕಡೆಗೆ ಹೋಗಲು ಮನಸ್ಸು ಒಪ್ತಿರಲಿಲ್ಲ. ಆ ಊರಿನವರೇ ಒಂದೆರಡು ಪ್ಲಾಸ್ಟಿಕ್ ಟಾರಪಾಲು ಹೊದ್ದಿಸಿ ಒಂದಿಷ್ಟು ವ್ಯವಸ್ಥೆ ಮಾಡಿದ್ದರು. ಹಲವಾರು ವರ್ಷಗಳಿಂದಲೂ ಇದೇ ಸಮಸ್ಯೆ.
#ಕೃಷ್ಣಯ್ಯರನ್ನು ಅಲ್ಲಿಂದ ಬೇರೆಡೆಗೆ ಷಿಫ್ಟ್ ಮಾಡಲು ಹಲವು ಪ್ರಯತ್ನ:#
ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಊರಿನ ಸಜ್ಜನರು ಯಾರು ಎಷ್ಟೇ ಪ್ರಯತ್ನಿಸಿದರೂ ಅಲ್ಲಿಂದ ಬೇರೆಡೆಗೆ ಹೋಗಲು ಅಜ್ಜ ಒಪ್ತಿರಲಿಲ್ಲ. ಹಲವು ಅಧಿಕಾರಿಗಳು ಹಲವು ವರ್ಷಗಳಿಂದ ಪ್ರಯತ್ನ ಪಟ್ಟರೂ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಕಳಿಸಲು ಸಾಧ್ಯವಾಗಿರಲಿಲ್ಲ.
ಬದುಕು ಬದಲಿಸಿದ ತಹಶಿಲ್ದಾರ್ ಪ್ರತಿಭಾ:
ಇಷ್ಟೆಲ್ಲ ವಿಷಯ ಮನಗಂಡ ತಹಶಿಲ್ದಾರ್ ಪ್ರತಿಭಾ ಆರ್ ರವರು ತಾವೇ ಸ್ವತಃ ಖುದ್ದಾಗಿ ಅಲ್ಲಿಗೆ ಬಂದು ಕೃಷ್ಣಯ್ಯ ಆಚಾರ್ಯ(82) ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. “ಅಜ್ಜಾ, ಮನೆ ತುಂಬಾ ಶಿಥಿಲವಾಗಿದೆ, ಮಣ್ಣಿನ ಗೋಡೆ ಈ ಮಳೆಗೆ ಬಿದ್ದು ಹೋಗುತ್ತೆ, ನಿಮ್ ಮೈ ಮೇಲೆ ಬಿದ್ದು ನಿಮಗೆ ಪೆಟ್ಟಾಗುತ್ತೆ, ಪ್ರಾಣ ಹಾನಿಯೂ ಆಗಬಹುದು, ಆದ್ದರಿಂದ ಇಲ್ಲಿಂದ ಹೊರಡಿ” ಎಂದು ಪರಿಪರಿಯಾಗಿ ಬೇಡಿದರೂ ಕೃಷ್ಣಯ್ಯನವರು ಮನಸ್ಸು ಮಾಡಲಿಲ್ಲ. ಆಗ ಪೊಲೀಸರ ಸಹಕಾರದಿಂದ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಊರಿನ ನಾಗರಿಕರಾದ ಸುರೇಶ್, ಸತೀಶ್ ಮತ್ತು ಸತೀಶ್ ರವರ ಸಹಕಾರದಿಂದ ಅವರನ್ನು ಆ ಶಿಥಿಲಗೊಂಡ ಮನೆಯಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ವೃದ್ಧಾಶ್ರಮಕ್ಕೆ ಸ್ಥಳಾಂತರ
ಮಾನ್ಯ ತಹಶಿಲ್ದಾರ್ ಪ್ರತಿಭಾ ರವರ ಪ್ರಯತ್ನದಿಂದ ಉದ್ಯಾವರದ ವೃದ್ಧಾಶ್ರಮಕ್ಕೆ ಸೇರಿಸುವ ಪ್ರಯತ್ನ ಯಶಸ್ವಿಯಾಯಿತು.
ಅಲ್ಲಿ ಬಂದ ತಕ್ಷಣ ಆ ಆಶ್ರಮದವರು ಬಿಸಿನೀರಿನ ಸ್ನಾನಕ್ಕೆ ವ್ಯವಸ್ಥೆ ಮಾಡಿ, ಬಿಸಿ ಊಟವನ್ನು ನೀಡಿದರು.
ಸ್ವಚ್ಛವಾಗಿದ್ದ ಪರಿಸರ, ನಾಗರಿಕ ಸೌಲಭ್ಯಗಳನ್ನು ಕಂಡು, ಇತರ ಸಮಾನ ವಯಸ್ಕರನ್ನು ಕಂಡು ಕೃಷ್ಣಯ್ಯರಿಗೂ ಮುಖದಲ್ಲಿ ನಗು ಮೂಡಿತು
ಇಂಥದ್ದೊಂದು ವ್ಯವಸ್ಥೆ ಮಾಡಿಕೊಟ್ಟ ತಹಶಿಲ್ದಾರ್ ಮೇಡಂ ಗೆ ಕೃಷ್ಣಯ್ಯ ಸಾವಿರ ಕೃತಜ್ಞತೆ ಸಲ್ಲಿಸಿದರು.
ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್ ಮತ್ತು ಗ್ರಾಮ ಆಡಳಿತಾಧಿಕಾರಿ ಸುನಿಲ್ ರವರು ಬಹಳ ಮುತುವರ್ಜಿ ವಹಿಸಿ ಈ ವೃದ್ಧರನ್ನು ಸ್ಥಳಾಂತರಿಸಲು ಸಹಕರಿಸಿರುತ್ತಾರೆ.
ತಹಶಿಲ್ದಾರ್ ಮೇಡಂ ರವರ ಮಾನವೀಯ ಕಳಕಳಿ:
ಆ ಒಂಟಿ ವೃದ್ಧರಿಗೆ ಒಂದು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿ ತಹಶಿಲ್ದಾರ್ ಪ್ರತಿಭಾ ರವರು ಮಾನವೀಯ ಕಳಕಳಿ ಮೆರೆದಿದ್ದಾರೆ. ಇಳಿವಯಸ್ಸಿನಲ್ಲಿ ಆ ವೃದ್ಧರಿಗೆ ಒಂದು ಆರೋಗ್ಯಕರ ಪರಿಸರ, ಸಮಾನ ವಯಸ್ಕರ ಒಡನಾಟ, ಉತ್ತಮ ಆಹಾರ ಒದಗಿಸಿ ಬದುಕಿನ ಇಳಿಸಂಜೆಯ ಬದುಕನ್ನು ಮತ್ತಷ್ಟು ಸಹ್ಯಗೊಳಿಸಿದ್ದಾರೆ. ಒಂಟಿ ಮುದುಕರು ಗೌರವಯುತವಾದ ಬದುಕು ಕಳೆಯಲು ಸಹಕಾರ ನೀಡಿದ್ದಾರೆ.
ತಹಶಿಲ್ದಾರ್ ಪ್ರತಿಭಾ ರವರ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರ:
ವಯಸ್ಸಾದ ವೃದ್ಧರನ್ನು ಸುರಕ್ಷಿತ ನೆಲೆಗೆ ಸ್ಥಳಾಂತರಿಸಿದ್ದಕ್ಕೆ, ಹಲವು ಅಧಿಕಾರಿಗಳು ಇದುವರೆಗೂ ಪ್ರಯತ್ನಿಸಿದರೂ ಯಶಸ್ವಿಯಾಗದ ಸ್ಥಳಾಂತರ ಕಾರ್ಯ ಪ್ರತಿಭಾರವರ ಮಾನವೀಯ ಕಳಕಳಿ ಮತ್ತು ಇಚ್ಛಾಶಕ್ತಿಯಿಂದ ಸಾಧ್ಯವಾಗಿದೆ ಎಂದು ಪ್ರಶಂಸಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, PDO ಶಶಿಧರ್, ಸ್ಥಳೀಯರಾದ ಸತೀಶ್, ಸುರೇಶ್ ಮತ್ತು ಸತೀಶ್, VAO ಸುನಿಲ್, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್ ತಹಶಿಲ್ದಾರ್ ರವರಿಗೆ ಸ್ಥಳಾಂತರಿಸಲು ಸಹಕರಿಸಿದರು.