ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ : ಎಸ್‌ಇಝೆಡ್‌ನ ಬಹು ಕಾಲದ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ..!- ಕಹಳೆ ನ್ಯೂಸ್
ಮಂಗಳೂರು ಆರ್ಥಿಕ ವಲಯ ( SEZ) ನಲ್ಲಿ ಜೆಬಿಎಫ್ ಪೆಟ್ರೊಕೆಮಿಕಲ್ಸ್ ಮತ್ತು ಗೇಲ್‌ನ ವಿಲೀನದಿಂದ ಎಸ್‌ಇಝೆಡ್ ನ ಜಾಗ ಕಳೆದುಕೊಂಡ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ವಿಷಯದ ಕುರಿತು ನಿರಂತರ ಬೆನ್ನಟ್ಟುತ್ತಿರುವ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇಂದು ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
JBF ಪೆಟ್ರೋಕೆಮಿಕಲ್ಸ್ ಮತ್ತು GAIL ನ ವಿಲೀನದ ಸಮಸ್ಯೆಗಳ ಕುರಿತು ಚರ್ಚೆ ನಡೆಸುವಂತೆ ಸಂಸದರು ಮಾಡಿದ ಮನವಿಯ ಮೇರೆಗೆ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಪೆಟ್ರೋಲಿಯಂ ಕಾರ್ಯದರ್ಶಿ ಪಂಕಜ್ ಜೈನ್, ಗೇಲ್‌ನ ಸಿಎಮ್‌ಡಿ ಸಂದೀಪ್ ಗುಪ್ತಾ ಮತ್ತು ಜಿಎಂಪಿಎಲ್ ನ ಸಿಎಮ್‌ಡಿ ಶ್ರೀ ಆಯುಷ್ ಗುಪ್ತಾ ಅವರ ಉಪಸ್ಥಿತಿಯಲ್ಲಿ ಇಂದು ದೆಹಲಿಯಲ್ಲಿ ವಿಶೇಷ ಸಭೆ ನಡೆಯಿತು.
ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಜಾಗ ಕಳೆದುಕೊಂಡ ಕುಟುಂಬ (PDF) ಗಳನ್ನು ಜಿಎಂಪಿಎಲ್ ನಲ್ಲಿ ಭರ್ತಿ ಮಾಡುವ ಕುರಿತು ಈ ಸಭೆಯಲ್ಲಿ ಚರ್ಚೆ ನಡೆದಿದೆ ಹಾಗೂ ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.
ಈ ಸಮಸ್ಯೆಯ ಫಾಲೋ ಅಪ್ ಎಂಬಂತೆ ಮೊದಲ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದರು ಆ ನಂತರದಲ್ಲಿ ಈ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಸಚಿವರಾದ ಡಾ. ಜೀತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದರು ಹಾಗೂ ಇಂದು ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಸಂಸದರ ಈ ನಿರಂತರ ಪ್ರಯತ್ನ ಪಿಡಿಎಫ್ ಕುಟುಂಬಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.