ಪ್ಯಾರಿಸ್ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್‌ನ ಭರವಸೆ ಮಂಗಳೂರಿನ ಅರ್ಚನಾ ಕಾಮತ್ – ಕಹಳೆ ನ್ಯೂಸ್
ಮಂಗಳೂರಿನ ಪದವಿನಂಗಡಿ ಮೂಲದ, ಬೆಂಗಳೂರಿನ ಪ್ರಸಿದ್ಧ ಕಣ್ಣಿನ ವೈದ್ಯರಾದ ಡಾ. ಗಿರೀಶ್ ಕಾಮತ್ ಮತ್ತು ಡಾ. ಅನುರಾಧಾ ಕಾಮತ್ ದಂಪತಿಯ ಮಗಳು ಅರ್ಚನಾ ಕಾಮತ್.
ಕೂತೂಹಲಕ್ಕೆಂದು ತನ್ನ ಸಂಬಂಧಿಕರ ಜೊತೆಗೆ ಟೇಬಲ್ ಟೆನಿಸ್ ಆಡಲು ಶುರುಮಾಡಿದ ಅರ್ಚನಾ ಅವರು ಒಂಭತ್ತು ವರ್ಷ ವಯಸ್ಸಿನ ಹುಡುಗಿಯಾಗಿದ್ದಾಗಿನಿಂದ ಗಂಭೀರವಾಗಿ ಈ ಆಟವನ್ನು ಪರಿಗಣಿಸಿದರು.
24 ವರ್ಷದ ಯುವ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್, ಎರಡು ಬಾರಿಯ ನ್ಯಾಷನಲ್ ಚಾಂಪಿಯನ್. ಕಳೆದ ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆದ 37ನೇ ನ್ಯಾಷನಲ್ ಗೇಮ್ಸ್‌ನಲ್ಲಿ ಮಹಿಳೆಯರ ಟೇಬಲ್ ಟೆನಿಸ್‌ನಲ್ಲಿ (ಸಿಂಗಲ್ಸ್) ಚಿನ್ನದ ಪದಕ ವಿಜೇತೆ. ಈಗ ಭಾರತ ಟೇಬಲ್ ಟೆನಿಸ್ ತಂಡದ ಅತೀ ಪ್ರಮುಖ ಸದಸ್ಯೆ.
ಈ ಪ್ಯಾರಿಸ್ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್ (ಮಹಿಳೆಯರ ತಂಡ) ಕ್ವಾರ್ಟರ್ ಫೈನಲ್ಸ್‌ನಲ್ಲಿ ತನಗಿಂತ ವಿಶ್ವ ರ್ಯಾಂಕಿಂಗ್‌ನಲ್ಲಿ 83 ಸ್ಥಾನ ಮೇಲಿರುವ, ರಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತ ಜರ್ಮನ್ ತಂಡದ ಶಾನ್ ಕ್ಸಿಯಾನ ವಿರುದ್ಧ ಜಯಗಳಿಸಿ ಅಚ್ಚರಿ ಮೂಡಿಸಿದ್ದರು. ಇದು ಕ್ವಾರ್ಟರ್ ಫೈನಲ್ಸ್ ಹೋರಾಟದಲ್ಲಿ ಭಾರತ ತಂಡಕ್ಕೆ ಸಿಕ್ಕ ಏಕೈಕ ಜಯವಾಗಿತ್ತು.
2018ರ ಯೂತ್ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಸೆಮಿಫೈನಲ್ಸ್ ತಲುಪಿ, ಈ ಸಾಧನೆ ಮಾಡಿದ ಮೊದಲ ಭಾರತೀಯರಾದ ಅರ್ಚನಾ ಕಾಮತ್ ಅವರಿಗೆ ಈ ಬಾರಿ ಎರಡನೆಯ ಒಲಿಂಪಿಕ್ಸ್.
ಈ ಒಲಿಂಪಿಕ್ಸ್‌ನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಚನಾ ಕಾಮತ್ ಮತ್ತು ಅಕುಲಾ ಶ್ರೀಜಾ ಜೋಡಿ ರೊಮೆನಿಯಾದ ಸಮಾರಾ ಮತ್ತು ಅಡಿನಾ ಜೋಡಿಯನ್ನು ಸೋಲಿಸಿ, ಭಾರತ ತಂಡ ಕ್ವಾರ್ಟರ್ ಫೈನಲ್ಸ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಅರ್ಚನಾ ಕಾಮತ್ ಸಾಗುತ್ತಿರುವ ಹಾದಿಗೆ, ಅವರಿಗೆ ಉತ್ತಮ ಪ್ರೋತ್ಸಾಹ ದೊರತರೆ ಮುಂದಿನ ದಿನಗಳಲ್ಲಿ ಒಲಂಪಿಕ್ಸ್ ಮೆಡಲಿಸ್ಟ್ ಆದರೂ ಆಶ್ಚರ್ಯವಿಲ್ಲ.