ಬೆಂಗಳೂರು: ಎಂಬಿಬಿಎಸ್ ಮತ್ತು ಬಿಡಿಎಸ್ ಪದವಿ ಸೇರುವ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪ್ರವೇಶ ಹಾಗೂ ಅರ್ಹತಾ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಮೇ 5 ರಂದು ಪರೀಕ್ಷೆ ನಡೆಯಲಿದೆ.
ಬೆಳಗ್ಗೆ ವೇಳೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳುವ ಸಂದರ್ಭದಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಅಪಾಯ ತಪ್ಪಿಸುವ ಸಲುವಾಗಿ ಈ ಬಾರಿ ಅಪರಾಹ್ನ 2 ಗಂಟೆಯಿಂದ ಪರೀಕ್ಷೆ ಆರಂಭಿಸಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಿರ್ಧರಿಸಿದೆ.
ಆನ್‌ಲೈನ್ ರಿಜಿಸ್ಟ್ರೇಷನ್ ಪ್ರಕ್ರಿಯೆ ಗುರುವಾರ ಆರಂಭವಾಗಿದ್ದು, ನವೆಂಬರ್ 30ರವರೆಗೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆದರೆ ಪರೀಕ್ಷೆ ಬಗ್ಗೆ ಅಪೂರ್ಣ ಮಾಹಿತಿಗಳನ್ನು ನೀಟ್ 2019 ವೆಬ್‌ಸೈಟ್ ಮತ್ತು ಆರೋಗ್ಯ ಸಚಿವಾಲಯ, ಎಂಸಿಐ ಮತ್ತು ಎಂಸಿಸಿ ವೆಬ್‌ಸೈಟ್‌ಗಳಲ್ಲಿ ನೀಡಿರುವ ಹಿನ್ನೆಲೆಯಲ್ಲಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಅಂಗವಿಕಲರ ಹಕ್ಕುಗಳ ಹೋರಾಟಗಾರರು ಆಗ್ರಹಿಸಿದ್ದಾರೆ.