Saturday, September 21, 2024
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕೂಳೂರು ಹಳೆ ಸೇತುವೆಯಲ್ಲಿ ಬಿರುಕು – ಸಂಚಾರ ಬಂದ್!!-ಕಹಳೆ ನ್ಯೂಸ್

ಮಂಗಳೂರು: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಹಾಗೂ ಹಳೆಯ ಸೇತುವೆ ಕೂಳೂರು ಹಳೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ದುರಸ್ತಿ ಕಾಮಗಾರಿ ಪ್ರಾರಂಭವಾಗಿದೆ. ಕೆಲ ದಿನಗಳವರೆಗೆ ನಿಗದಿತ ಸಮಯದಲ್ಲಿ ಮಾತ್ರ ಸಂಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಕಾಮಗಾರಿ ಪ್ರಾರಂಭವಾಗಿದ್ದು, ಸಂಚಾರ ಬಂದ್ ಮಾಡಲಾಗಿದೆ. ಇಂದು ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಆಗಿರುವ ದೃಶ್ಯ ಕಂಡುಬಂದಿದೆ. ವಾಹನ ಸಂಚಾರಕ್ಕೆ ಒಂದು ಕಡೆಯ ಸೇತುವೆ ಮೇಲೆ ಅವಕಾಶ ನೀಡಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಜಾಹೀರಾತು

ಹಾಗಾಗಿ ಕೆಲವು ದಿನಗಳ ವರೆಗೆ ಬೆಳಗ್ಗೆ 6ರಿಂದ 11ರ ವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 10ರ ಅವಧಿಯಲ್ಲಿ ಉಡುಪಿ ಕಡೆಯಿಂದ ಕೇರಳಕ್ಕೆ ಸಂಚರಿಸುವ ಭಾರಿ ವಾಹನಗಳು ಮೂಲ್ಕಿ–ಸುರತ್ಕಲ್‌– ಎಂಆರ್‌ಪಿಎಲ್‌–ಬಜಪೆ–ಕೆಪಿಟಿ–ನಂತೂರು ಮಾರ್ಗವಾಗಿ ಹಾಗೂ ಉಡುಪಿ ಕಡೆಯಿಂದ ಬೆಂಗಳೂರು ಸಂಚರಿಸುವ ವಾಹನಗಳು ಉಡುಪಿ–ಮೂಲ್ಕಿ–ಮೂಡುಬಿದಿರೆ–ಬಂಟ್ವಾಳ ಮಾರ್ಗವಾಗಿ ಸಂಚರಿಸಬೇಕು ಎನ್ನುವಂತೆ ಆದೇಶ ನೀಡಲಾಗಿದೆ.

ಫಲ್ಗುಣಿ ನದಿಗೆ ಕಟ್ಟಿರುವ, ಮಂಗಳೂರು ನಗರಕ್ಕೆ ಪ್ರವೇಶ ಕಲ್ಪಿಸುವ ಕೂಳೂರು ಸೇತುವೆ 1952ರಲ್ಲಿ ಮದ್ರಾಸ್ ಪ್ರಾಂತ್ಯದ ಸಚಿವ ಎನ್. ರಂಗರೆಡ್ಡಿ ಉದ್ಘಾಟಿಸಿದ್ದರು ಎಂದು ದಾಖಲೆಗಳು ಹೇಳುತ್ತವೆ. ಈ ಹಳೆಯ ಸೇತುವೆ ಮೇಲೆ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಕೂಳೂರು ಸೇತುವೆಯಲ್ಲಿ ಭಾರಿ ವಾಹನ ಸಂಚಾರ ನಿಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2018ರಲ್ಲಿ ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. ಆಗ ಹೈದರಾಬಾದ್‌ನ ಮೆ. ಆರ್ವಿ ಅಸೋಸಿಯೇಟ್ಸ್ ಏಜೆನ್ಸಿಯು ಸೇತುವೆ ತಪಾಸಣೆ ನಡೆಸಿತ್ತು. 2020ರಲ್ಲಿ ‘ಮೈಕ್ರೋ ಕಾಂಟೆಸ್ಟ್’ ತಂತ್ರಜ್ಞಾನದೊಂದಿಗೆ 38 ಲಕ್ಷ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ದುರಸ್ತಿಗೊಳಿಸಲಾಗಿತ್ತು. ಆಗಿನ ಸಂಸದ ನಳಿನ್‌ಕುಮಾರ್ ಕಟೀಲ್, ನವೀನ ತಂತ್ರಜ್ಞಾನದೊಂದಿಗೆ ಸೇತುವೆ ಭದ್ರಗೊಳಿಸಲಾಗಿದೆ ಎಂದಿದ್ದರು. ಅದಾಗಿ ನಾಲ್ಕು ವರ್ಷಗಳು ಕಳೆದ ಬಳಿಕ ಈಗ ಸೇತುವೆಯ ಬಗ್ಗೆ ಆತಂಕ ಸೃಷ್ಟಿಯಾಗಿತ್ತು. ಸೇತುವೆಯ ಸಾಮರ್ಥ್ಯ ಯಾವ ಪ್ರಮಾಣದಲ್ಲಿದೆ ಎಂಬುದನ್ನು ತುರ್ತಾಗಿ ತಪಾಸಣೆ ನಡೆಸಬೇಕಾಗಿದೆ ಎಂಬ ಕೂಗು ಕೇಳಿಬರಲಾರಂಭಿಸಿತ್ತು. ಸದ್ಯ ಕಾಮಗಾರಿ ಪ್ರಾರಂಭವಾದಂತೆ ಕಾಣುತ್ತಿದೆ.