Saturday, September 14, 2024
ದಕ್ಷಿಣ ಕನ್ನಡಸುದ್ದಿ

ಬಿಜೆಪಿ ಸದಸ್ಯತ್ವ ಅಭಿಯಾನ ಯುವ ಸಮುದಾಯವನ್ನು ಸೆಳೆಯಲಿ: ಸಂಸದ ಕ್ಯಾ. ಚೌಟ ಕರೆ-ಕಹಳೆ ನ್ಯೂಸ್

ಶಿವಮೊಗ್ಗ : ಪ್ರಸಕ್ತ ಬಿಜೆಪಿ ಸದಸ್ಯತ್ವ ಅಭಿಯಾನವು ಪಕ್ಷ ಸೇರಲು ಹುಮ್ಮಸ್ಸಿನಲ್ಲಿರುವ ‘ಜೆನ್ ಝೆಡ್ ‘ ತಲೆಮಾರಿನ ಯುವ ಸಮುದಾಯವನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕರೆ ನೀಡಿದ್ದಾರೆ.

ಭಾರತೀಯ ಜನತಾ ಪಾರ್ಟಿಯ “ಸದಸ್ಯತಾ ಅಭಿಯಾನ-2024” ಇದರ ಅಂಗವಾಗಿ ಇಂದು ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲಿ ನಡೆದ ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಸಂಸದರು, “2000ದ ನಂತರ ಜನಿಸಿದ ಜನರೇಷನ್ – Z ಎಂದು ಕರೆಯಲ್ಪಡುವ 18-24 ವರ್ಷದ ಯುವಕ- ಯುವತಿಯರು ಭಾರತೀಯ ಜನತಾ ಪಕ್ಷ ಸೇರಲು ಹುಮ್ಮಸ್ಸಿನಿಂದ ಇದ್ದಾರೆ. ಇಂತಹ ಯುವ ಪೀಳಿಗೆಯ ಆಸಕ್ತರನ್ನು ಪಕ್ಷದ ಸದಸ್ಯರನ್ನಾಗಿ ಭರಮಾಡಿಕೊಳ್ಳುವತ್ತ ನಾವೆಲ್ಲಾ ಒಟ್ಟುಗೂಡಿ ಕೆಲಸ ಮಾಡಬೇಕು. ವಿದ್ಯಾರ್ಥಿ ಸಮುದಾಯ ಯುವ ಪೀಳಿಗೆ, ಮಾತ್ರವಲ್ಲದೇ ಸಮಾಜದ ಎಲ್ಲಾ ಸಮುದಾಯ-ವರ್ಗದ ಹಾಗೂ ವಿಶೇಷವಾಗಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸದಸ್ಯರನ್ನಾಗಿಸುವ ಮೂಲಕ ಈ ಅಭಿಯಾನ ಸರ್ವ ವ್ಯಾಪಿ ಸರ್ವ ಸ್ಪರ್ಶಿಯಾಗುವಂತೆ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಪಕ್ಷವು ಶಿಸ್ತಿಗೆ ಹೆಸರುವಾಸಿಯಾಗಿದ್ದು, ಶ್ರೇಷ್ಟ ಮೌಲ್ಯ, ಸಿದ್ದಾಂತದ ಮೇಲೆ ನಮ್ಮ ಪಕ್ಷ ನಿಂತಿದೆ. ದೇಶದೆಲ್ಲೆಡೆ ನಮ್ಮ ಪಕ್ಷವು ವ್ಯಾಪಿಸಿದ್ದು, ಕುಟುಂಬ ರಾಜಕಾರಣಕ್ಕೆ ಮಣೆ ಹಾಕದೆ, ಹೊಸ ಮುಖಗಳಿಗೆ, ಯುವ ಮನಸ್ಸುಗಳಿಗೆ ಅವಕಾಶ ನೀಡುತ್ತಿದೆ. ಹೀಗಿರುವಾಗ ಪಕ್ಷದ ಕಾರ್ಯಕರ್ತರು ಸದಸ್ಯತ್ವ ಅಭಿಯಾನದ ಮೂಲಕದ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದಿದ್ದಾರೆ.

ಜಾಹೀರಾತು

ಸೆಪ್ಟಂಬರ್ 1 ರಿಂದ ನಡೆಯಲಿರುವ ಸದಸ್ಯತ್ವ ಅಭಿಯಾನದಲ್ಲಿ ಮಿಸ್ಡ್ ಕಾಲ್, ಕ್ಯೂಆರ್ ಕೋಡ್, ನಮೋ ಆಪ್, ಮತ್ತು ಬಿಜೆಪಿ ವೆಬ್ ಸೈಟ್ ಮೂಲಕ ಹೊಸ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಈ ವಿಶೇಷ ಅಭಿಯಾನದ ಮೂಲಕ ರಾಷ್ಟ್ರದಾದ್ಯಂತ ಗರಿಷ್ಟ ಸಂಖ್ಯೆಯಲ್ಲಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿಯತ್ತ ನಾವೆಲ್ಲ ಕಾರ್ಯೋನ್ಮುಖರಾಗಬೇಕು ಎಂದು ಕ್ಯಾ. ಚೌಟ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.