Friday, September 20, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಅಮೃತ ದೇವಿ ಪ್ರಕೃತಿ ವಂದನ 2024” ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಅಮೃತ ದೇವಿ ಪ್ರಕೃತಿ ವಂದನ 2024” ಕಾರ್ಯಕ್ರಮ ನಡೆಯಿತು.

“370 ವರ್ಷಗಳ ಹಿಂದೆ ರಾಜಸ್ಥಾನದ ಜೋಧ್‌ಪುರದ ರಾಜ ಅಭಯಸಿಂಹನ ಸೈನಿಕರು ವೃಕ್ಷ ಕತ್ತರಿಸಲು ಮುಂದಾದಾಗ ಸೈನಿಕರನ್ನು ಎದುರಿಸಿ ಮರಗಳನ್ನು ಅಪ್ಪಿಕೊಂಡು ಸೈನಿಕರಿಂದ ತಲೆ ಕತ್ತರಿಸಲ್ಪಟ್ಟವರು ಖೇಜವಾಡಿ ಗ್ರಾಮದ ಅಮೃತದೇವಿ ಎಂಬ ವೃಕ್ಷ ಪ್ರೇಮಿ ಕುಟುಂಬ. ಅವರೊಂದಿಗೆ ಮರವನ್ನು ಅಪ್ಪಿಕೊಂಡ ನಿಂತ ಅದೇ ಗ್ರಾಮದ 363 ನರ-ನಾರಿಯರನ್ನು ಕೂಡ ನಿರ್ದಾಕ್ಷಿಣವಾಗಿ ಹತ್ಯೆ ಮಾಡುತ್ತಾರೆ ಸೈನಿಕರು. ಈ ವಿಷಯ ತಿಳಿದು ದಿಗಿಲಾದ ಸೈನಿಕ ಊರಿನವರ ಬಳಿ ಕ್ಷಮಾಪಣೆ ಕೇಳಿ, ಅಮೃತದೇವಿಯ ಸ್ಮಾರಕ ಮಾಡುತ್ತಾನೆ. ಅಮೃತ ದೇವಿ ತನ್ನ ಪರಿವಾರ ಸಮೇತ ಪರಿಸರ ಸಂರಕ್ಷಣೆಗಾಗಿ ಬಲಿಯಾದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಆದರೆ ಇಂದು ಅಮೃತ ದೇವಿಯ ಅಮರ ಬಲಿದಾನ ಅಜ್ಞಾತವಾಗಿಯೆ ಉಳಿದಿದೆ. ಮನುಷ್ಯ ಸತ್ತರೆ ಮಣ್ಣಿಗೆ, ಮಣ್ಣೇ ಸತ್ತರೆ ಇನ್ನೆಲ್ಲಿಗೆ? ಮಣ್ಣು ಸಂರಕ್ಷಣೆಗೆ ಮರಗಳು ಅವಶ್ಯಕ. ಒಬ್ಬ ವ್ಯಕ್ತಿಗೆ ತಲಾ 428 ವೃಕ್ಷಗಳಿರಬೇಕು. ಆದರೆ ಇಂದು ಇರುವುದು ಕೇವಲ 28. ಈ ಅಮರ ಬಲಿದಾನದ ಪ್ರಯುಕ್ತ ಪ್ರತಿಯೊಬ್ಬರು ಕನಿಷ್ಟ ಒಂದಾದರೂ ಗಿಡ ನೆಡುವ ಸಂಕಲ್ಪ ಮಾಡುವ” ಎಂದು ಶ್ರೀರಾಮ ಪ್ರಾಥಮಿಕ ವಿಭಾಗದ ಅಧ್ಯಾಪಕ ಬಾಲಕೃಷ್ಣ ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯಲ್ಲಿನ ಹಲಸಿನ ವೃಕ್ಷವನ್ನು ಅಲಂಕರಿಸಿ ಪೂಜಿಸಲಾಯಿತು. ಒಂದನೇ ತರಗತಿಯ ವಿದ್ಯಾರ್ಥಿಗಳು ಆರತಿ ಬೆಳಗಿದರು. ನಂತರ ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಶಾಲೆಯ ಬಳಿ ಗಿಡಗಳನ್ನು ನೆಟ್ಟರು. ಕಾರ್ಯಕ್ರಮವನ್ನು ವಿಜ್ಞಾನ ಸಂಘದವರು ನಿರ್ವಹಿಸಿದರು.