ಚದುರಂಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ವಿದ್ಯಾರಣ್ಯ ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ – ಕಹಳೆ ನ್ಯೂಸ್
“ಹಿಂದೆ ರಾಜಾಶ್ರಯದಲ್ಲಿ ಬೆಳಕು ಕಾಣುತ್ತಿದ್ದ ಪ್ರತಿಭೆಗಳು ಇಂದು ಶಾಲೆಗಳಲ್ಲಿ ಬೆಳಕು ಕಾಣುತ್ತಿವೆ.ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಹೊರ ಜಗತ್ತಿಗೆ ತರಲು ಶಾಲೆಯಷ್ಟು ಒಳ್ಳೆಯ ವೇದಿಕೆ ಬೇರೆ ಎಲ್ಲಿಯೂ ಸಿಗಲು ಸಾಧ್ಯವಿಲ್ಲ” ಎಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ಡಾ.ಜೀವನ್ ರಾಮ್ ಸುಳ್ಯ ಹೇಳಿದರು. ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಯಡಾಡಿ – ಮತ್ಯಾಡಿ ಇಲ್ಲಿ ಚದುರಂಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ಅಭಿನಂದನಾ ಸಮಾರಂಭ ನಡೆಯಿತು.
ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಪ್ರೌಢ ಶಾಲಾ ವಿಭಾಗದ 17 ವರ್ಷ ವಯೋಮಾನದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಸಂಸ್ಥೆಯ ವಿದ್ಯಾರ್ಥಿನಿ ಪ್ರಕೃತಿ ಪಿ. ಶೆಟ್ಟಿ ಯವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.ಇವಳು ದಬ್ಬೆಕಟ್ಟೆಯ ಪ್ರಕಾಶ್ ಪಿ.ಶೆಟ್ಟಿ ಮತ್ತು ಸಂಗೀತ ಶೆಟ್ಟಿ ಅವರ ಪುತ್ರಿಯಾಗಿದ್ದು ಪ್ರಸ್ತುತ ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 9ನೆ ತರಗತಿಯಲ್ಲಿ ಓದುತ್ತಿದ್ದಾಳೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ಡಾ.ಜೀವನ್ ರಾಮ್ ಸುಳ್ಯ ಉಪಸ್ಥಿತರಿದ್ದರು.ಶಾಲಾ ಆಡಳಿತ ಮಂಡಳಿಯ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ,ಭರತ ನಾಟ್ಯ ಕಲಾವಿದೆ ವಿದುಷಿ ವಿದ್ಯಾ ಸಂದೇಶ್,ವಿದುಷಿ ಸ್ವಪ್ನ ಕಿಶೋರ್,ವಿದ್ವಾನ್ ಕೆ.ಭವಾನಿ ಶಂಕರ್,ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಮತ್ತು ಮುಖ್ಯ ಶಿಕ್ಷಕ ಪ್ರದೀಪ್ ಕೆ ಶುಭ ಹಾರೈಸಿದರು. ಶಿಕ್ಷಕ ಸಂತೋಷ್ ಕುಮಾರ್ ಮತ್ತು ಶಿಕ್ಷಕಿ ರೇಣುಕಾ ಕಾರ್ಯಕ್ರಮ ನಿರ್ವಹಿಸಿದರು.