Friday, September 20, 2024
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆ ಸಂಭ್ರಮ- ಕಹಳೆ ನ್ಯೂಸ್

ಪುತ್ತೂರು : ಜೀವನ ಸಮಯದ ಸದುಪಯೋಗ ಕಲಿಸಿದರೆ, ಸಮಯ ಬದುಕಿನ ಮೌಲ್ಯ ತಿಳಿಸುತ್ತದೆ. ಶಿಕ್ಷಣ ಮಾನವನಿಗೆ ಉತ್ತಮ ಮೌಲ್ಯಗಳನ್ನು ಕೌಶಲ್ಯ ಮತ್ತು ಅನುಭವಗಳೊಂದಿಗೆ ತಿಳಿಸುತ್ತಾ ಹೋಗುತ್ತದೆ. ನಮ್ಮ ವ್ಯಕ್ತಿತ್ವ ವಿಕಸನಗೊಳ್ಳಲು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಪುತ್ತೂರಿನ ಪ್ರಸಿದ್ಧ ದಂತ ವೈದ್ಯರು ಹಾಗೂ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಡಾ. ಶ್ರೀ ಪ್ರಕಾಶ್ ಬಿ ಹೇಳಿದರು.

ಅವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕ ದಿನಾಚರಣೆಯ ಆಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಶಿಕ್ಷಕರು ಹೇಳುವ ಪ್ರತಿಯೊಂದು ಮಾತು ಅರ್ಥಗರ್ಭಿತವಾದದ್ದು. ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪಿಸುವ ಮಹಾನ್ ಶಕ್ತಿ ಎಂದರೆ ಗುರುಗಳು. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಕರ ನಿಸ್ವಾರ್ಥ ಸೇವೆ, ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಅವರ ಪಾತ್ರ ಮತ್ತು ಒಟ್ಟಾರೆಯಾಗಿ ವ್ಯಕ್ತಿಗಳು ಮತ್ತು ಸಮಾಜದ ಮೇಲೆ ಶಿಕ್ಷಕರು ಬೀರುವ ಸಕರಾತ್ಮಕ ಪ್ರಭಾವವನ್ನು ನಾವು ಸ್ಮರಿಸಲೇಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ. ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಶಿಕ್ಷಕರು ವ್ಯಕ್ತಿಯ ಇಡೀ ಜೀವನವನ್ನೇ ರೂಪಿಸುತ್ತಾರೆ. ಶಿಕ್ಷಕರು ಪಾಠದ ಜೊತೆಗೆ ಒಳ್ಳೆಯ ಸಂಸ್ಕಾರ, ದೇವರಲ್ಲಿ ಭಯ-ಭಕ್ತಿ, ನಂಬಿಕೆಯನ್ನು ಉತ್ತಮ ನಡತೆ, ಜೀವನ ಮೌಲ್ಯ, ತಪ್ಪುಗಳನ್ನು ತಿದ್ದುವ ಕಾರ್ಯವನ್ನು ಮಾಡುತ್ತಾರೆ. ಸ್ವಾರ್ಥ ಇಲ್ಲದ ನಿಸ್ವಾರ್ಥ ಸೇವೆ ಶಿಕ್ಷಕರದ್ದಾಗಿದೆ. ಮಕ್ಕಳು ಸಮಾಜದಲ್ಲಿ ಸುಸಂಸ್ಕೃತ ರಾಗಬೇಕು
ಎಂಬುದೇ ಗುರುವಿನ ಉದ್ದೇಶ. ಹೆತ್ತವರಿಗೆ ಮತ್ತು ಗುರುಗಳಿಗೆ ನಾವು ಪ್ರತಿ ದಿನ ವಿಧೇಯರಾಗಿ ಗೌರವವನ್ನು ನೀಡುವ ಎಂದು ಹೇಳಿದರು.

ಜಾಹೀರಾತು

ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರತಿಮಾ ಹೆಗ್ಡೆ ಹಾಗೂ ಕಾಲೇಜಿನ ಪ್ರಾಂಶುಪಾಲ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ದ್ವಿತೀಯ ವಿಜ್ಞಾನ ವಿಭಾಗದ ಹಿಮಾ ಬಿ ಶಿಕ್ಷಕರ ದಿನಾಚರಣೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೀಡಿದರು. ರಕ್ಷಕ – ಶಿಕ್ಷಕ ಸಂಘದ ಪದಾದಿಕಾರಿಗಳು, ಕಾಲೇಜಿನ ಬೋಧಕ/ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಸೃದ್ಧನ್ ಆಳ್ವಾ ಕೆ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯದರ್ಶಿ ಧ್ರುವ ಜೆ ಭಂಡಾರಿ ವಂದಿಸಿ, ಅಧ್ಯಕ್ಷರಾದ ಅಂಕಿತ ಎಲ್.ಡಿ ಕಾರ್ಯಕ್ರಮ ನಿರೂಪಿಸಿದರು