ಉಡುಪಿ : ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಹಲಾಲ್ ರಹಿತ ಉತ್ಪನ್ನಗಳನ್ನು ಉಪಯೋಗಿಸಿ ‘ಹಲಾಲ್` ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂ ಜನಜಾಗೃತಿಯು ಕರೆ ನೀಡಿದೆ. ಈ ಬಗ್ಗೆ ಉಡುಪಿ, ಕುಂದಾಪುರ, ಕಾರ್ಕಳ, ಮೂಡುಬಿದಿರೆ ಸೇರಿದಂತೆ ಉಡುಪಿ ಜಿಲ್ಲೆಯಾದ್ಯಂತ ಗಣೇಶೋತ್ಸವ ಮಂಡಳಿಗಳಿಗೆ, ಉಡುಪಿ ಜಿಲ್ಲಾ ನಗರ ಸಭಾ ಆಯುಕ್ತರಿಗೆ, ಪುರಸಭೆ ಮುಖ್ಯಾಧಿಕಾರಿ ಕಾರ್ಕಳ ಇವರಿಗೆ ಕೂಡಾ ಮನವಿ ನೀಡಲಾಗಿದ್ದು, ಈ ಬಾರಿ ‘ಹಲಾಲ್ ಮುಕ್ತ ಗಣೇಶೋತ್ಸವ` ಆಚರಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.
‘ಗಣೇಶೋತ್ಸವ ಆಚರಣೆಯ ಸಮಯದಲ್ಲಿ ಶ್ರೀ ಗಣೇಶನ ಪೂಜಾ ಸಾಮಗ್ರಿಗಳು ಮತ್ತು ಪ್ರಸಾದವು ’ಹಲಾಲ್ ಪ್ರಮಾಣೀಕೃತ’ ಆಗಿಲ್ಲವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮೂಲತಃ ಮಾಂಸಾಹಾರಕ್ಕೆ ಮಾತ್ರ ಸೀಮಿತವಾಗಿದ್ದ `ಹಲಾಲ್’ ಎಂಬ ಮೂಲ ಇಸ್ಲಾಮಿಕ್ ಪರಿಕಲ್ಪನೆಯು ಇಂದು ಆಹಾರ ಧಾನ್ಯಗಳು, ಸಿಹಿತಿಂಡಿಗಳು, ಸೌಂದರ್ಯವರ್ಧಕಗಳು, ಸಸ್ಯಾಹಾರಿ ಆಹಾರಗಳು, ಔಷಧಗಳು, ಪ್ರವಾಸೋದ್ಯಮ, ಆಸ್ಪತ್ರೆಗಳು, ಕಟ್ಟಡಗಳು, ರೆಸ್ಟೋರೆಂಟ್‌ಗಳು, ವೆಬ್‌ಸೈಟ್‌ಗಳು ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕಾಲಿಟ್ಟಿದೆ.
ಜಾತ್ಯತೀತ ಭಾರತದಲ್ಲಿ ಧಾರ್ಮಿಕ ಆಧಾರದಲ್ಲಿ ಸರ್ಟಿಫಿಕೇಶನ್ ಕಾನೂನುಬಾಹಿರವಾಗಿದೆ. ಹಾಗಾಗಿ ಈ ಬಾರಿ ’ಹಲಾಲ್ ಮುಕ್ತ ಗಣೇಶೋತ್ಸವ’ ಆಚರಿಸಿರಿ` ಎಂದು ಕರೆ ನೀಡಲಾಯಿತು. ಮನವಿಗೆ ಉತ್ತಮ ಸ್ಪಂದನೆ ನೀಡುತ್ತಿದ್ದ ಸಾರ್ವಜನಿಕರು ತಾವು ಹಲಾಲ್ ಯುಕ್ತ ಯಾವುದೇ ಸಾಮಗ್ರಿಗಳನ್ನು ಖರೀದಿಸುವುದಿಲ್ಲ ಹಾಗೂ ಹಲಾಲ್ ಪ್ರಮಾಣೀಕರಣದ ಭೀಕರತೆ ಬಗ್ಗೆ ಇತರರಿಗೂ ಜಾಗೃತಿ ಮೂಡಿಸುತ್ತೇವೆಂದು ಸಂಕಲ್ಪ ಮಾಡಿದರು.