ದೆಹಲಿ: ಕಳೆದ ತಿಂಗಳು ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೆ ಏರಿದ್ದರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೀಗ ಕಳೆದ 18 ದಿನದಿಂದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿದೆ.
ಕಳೆದ 18 ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 4 ರೂಪಾಯಿ ಹಾಗೂ ಡಿಸೇಲ್ ದರದಲ್ಲಿ 2.33 ರೂಪಾಯಿ ಕಡಿತವಾಗಿದ್ದು, ಇದೀಗ ದೆಹಲಿಯಲ್ಲಿ ಪೆಟ್ರೋಲ್ ದರ 78.78 ಹಾಗೂ ಡಿಸೇಲ್ ದರದಲ್ಲಿ 73.36 ರೂ.ಗೆ ಕುಸಿದಿದೆ.
ಕಚ್ಚಾ ತೈಲ ಬೆಲೆ ಕುರಿತಂತೆ ಕೆಲ ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಧಮೇರ್ಂದ್ರ ಪ್ರಧಾನ್, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯನ್ನು ಕೇಂದ್ರ ಸರಕಾರ ನಿರ್ಧರಿಸಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದರ ಬದಲಾದಂತೆ ದೇಶದಲ್ಲಿಯೂ ದರ ಏರಿಳಿತವಾಗಲಿದೆ ಎಂದಿದ್ದರು.
ಈ ರೀತಿಯ ಕುಸಿತಕ್ಕೆ ಪ್ರಮುಖವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಇಳಿಕೆಯಾಗಿರುವುದೇ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆಯಾಗಿರುವುದು ಮತ್ತೊಂದು ಕಾರಣವಾಗಿದೆ. ಒಟ್ಟಾಗಿ ದೀಪಾವಳಿ ಸಮಯದಲ್ಲಿ ತೈಲ ಬೆಲೆ ಇಳಿಕೆಯಾಗಿರೋದು ಕೊಂಚ ನೆಮ್ಮದಿ ಮೂಡಿಸಿದೆ.