Tuesday, December 3, 2024
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಎಸ್.ಡಿ.ಎಂ ಪಿಜಿ ಸೆಂಟರ್ನಲ್ಲಿ ಓರಿಯೆಂಟೇಶನ್ ಕಾರ್ಯಕ್ರಮ-ಕಹಳೆ ನ್ಯೂಸ್

ಉಜಿರೆ: ಕೌಶಲ್ಯಗಳನ್ನು ನವೀಕರಿಸಿಕೊಂಡು ಜ್ಞಾನಾಧಾರಿತ ಸಂಶೋಧನಾ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸಲು ಸಾಧ್ಯ, ಎಂದು ಬೆಂಗಳೂರಿನ ಸಿಗ್ಮಾ ಅಲ್ಡ್ರಿಜ್ ಕಂಪನಿಯ ತಾಂತ್ರಿಕ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ, ಮುಖ್ಯಸ್ಥ ಡಾ.ರವೀಂದ್ರ ವಿಕ್ರಮ್ ಸಿಂಗ್ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಉದ್ದೇಶದಿಂದ ಇಂದ್ರಪ್ರಸ್ಥ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಓರಿಯಂಟೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹತ್ತು ವರ್ಷದ ಹಿಂದಿನ ಕೌಶಲ್ಯಗಳು ಈಗ ಉಪಯೋಗಕ್ಕೆ ಬರುವುದಿಲ್ಲ. ಜಗತ್ತು ತಾಂತ್ರಿಕವಾಗಿ ಬದಲಾಗಿದೆ. ಹಳೆಯ ಕೌಶಲ್ಯಗಳ ನವೀಕರಣ ಇಂದಿನ ಅಗತ್ಯ. ತಂತ್ರಜ್ಞಾನವನ್ನು ನಿರಾಕರಿಸುವಂತಿಲ್ಲ. ಟೀಕಿಸಿ ದೂರ ನಿಲ್ಲುವಂತಿಲ್ಲ, ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ, ಸ್ಪರ್ಧಾತ್ಮಕತೆ, ತಾರ್ಕಿಕ ಚಿಂತನೆ, ಕೌಶಲ್ಯ ಮತ್ತು ವಿವೇಚನಾತ್ಮಕ ಎಚ್ಚರದೊಂದಿಗೆ ಸಾಧನೆಯ ಹಾದಿಯನ್ನು ಕ್ರಮಿಸಬೇಕು, ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಸ್ನಾತಕೋತ್ತರ ಹಂತದಲ್ಲಿ ವಿಸ್ತೃತ ಜ್ಞಾನಾರ್ಜನೆಯ ತುಡಿತ ಮತ್ತು ಪ್ರಾಯೋಗಿಕ ಅನ್ವಯಿಕತೆಯ ಪ್ರಜ್ಞೆಯೊಂದಿಗೆ ಕಲಿಕೆಯನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು, ಎಂದರು.

 

ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ, ಓರಿಯಂಟೇಶನ್ ಕಾರ್ಯಕ್ರಮದ ವಿವರಗಳನ್ನೊಳಗೊಂಡ ʼಎಸ್.ಡಿ.ಎಂ ಗೆಜೆಟ್ʼನ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಉಪಪ್ರಾಂಶುಪಾಲ ಎಸ್.ಎನ್ ಕಾಕತ್ಕರ್ ಅತಿಥಿಗಳನ್ನು ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ.ನೆಫಿಸತ್ ಪಿ ಹಾಗೂ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕ ಸ್ವಾತಿ ಬಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ ವಂದಿಸಿದರು.