Wednesday, September 18, 2024
ಅಂಕಣದಕ್ಷಿಣ ಕನ್ನಡಬಂಟ್ವಾಳಸುದ್ದಿ

“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ- ಕಹಳೆ ನ್ಯೂಸ್

ಎಲ್ಲದರಲ್ಲೂ ಧಾವಂತ ಇರುವ ಈ ಕಾಲಘಟ್ಟದಲ್ಲಿ, ವಾಣಿಜ್ಯೋದ್ಯಮದೊಂದಿಗೆ ; ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ, ಶೈಕ್ಷಣಿಕ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳೂ ವೇಗವಾಗಿ ಮುಂದುವರಿಯುತ್ತಿವೆ. ಸನಾತನ ಸಂಸ್ಕೃತಿಯೂ ಇದೇ ರೀತಿ ಬೆಳೆಯಬೇಕು ಎಂಬ ಬಯಕೆ ಬಹುತೇಕರದ್ದು.

ಕಾರ್ಯಕ್ರಮಗಳನ್ನು ಮಾಡಬೇಕೆಂಬ ಹಂಬಲ ಇದ್ದರೂ ಸ್ಥಳದ ಅಭಾವ, ಯೋಗ್ಯ ಪರಿಕರಗಳ ಕೊರತೆ ಹಲವರನ್ನು ಕಾಡುತ್ತದೆ. ಊಟ-ಉಪಹಾರ-ಪಾನೀಯ-ಉಪಚಾರ ಇತ್ಯಾದಿ ವಿಷಯಗಳ ನಿರ್ವಹಣೆ, ವೈದಿಕರನ್ನು ಹೊಂದಿಸುವಿಕೆ, ಪಾಕಶಾಸ್ತ್ರಜ್ಞರ ತಂಡವನ್ನು ಕರೆಸುವಿಕೆ, ದಿನಸಿ ಸಾಮಾನು, ಪೂಜಾ ಸಾಮಾಗ್ರಿಗಳ ಪಟ್ಟಿ ಹಾಗೂ ಖರೀದಿ, ಬೆಳಕು, ಧ್ವನಿ ವರ್ಧಕ, ಆಸನಗಳ ವ್ಯವಸ್ಥೆ, ಸ್ವಚ್ಛತೆ ಇತ್ಯಾದಿಗಳನ್ನು ನಿಭಾಯಿಸುವ ಕಾರ್ಯ ಅಷ್ಟು ಸುಲಭವಲ್ಲ. ಒಟ್ಟಾರೆ ಹೇಳುವುದಾದರೆ ; ಒಂದು ಕಾರ್ಯಕ್ರಮವನ್ನು ನಿಶ್ಚೈಸಿ, ನೆರವೇರಿಸಿ, ಪಾತ್ರೆ- ಪರಿಕರಗಳನ್ನು ಶುಚಿಗೊಳಿಸಿ ಸ್ವಸ್ಥಾನದಲ್ಲಿ ಇಡುವ ವರೆಗಿನ ಕೆಲಸ ಸಣ್ಣದಲ್ಲ. ಯಾವುದೇ ಕಾರ್ಯಗಳನ್ನು ಮನೆಯಲ್ಲೇ ಮಾಡುವುದಾದರೆ ತುಂಬಾ ಶ್ರಮವಹಿಸಬೇಕಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಆದರೆ ಈಗ ; ಮನೆಯಲ್ಲಿ ಮಾಡಿದಂತೆಯೇ ಕಾರ್ಯಕ್ರಮ ಸುಗಮವಾಗಿ ನಡೆಯಲು ಏನೆಲ್ಲಾ ಕೆಲಸ ಕಾರ್ಯಗಳು ಇವೆಯೋ ಅವುಗಳನ್ನು ಸೊಗಸಾಗಿ, ಸುವ್ಯವಸ್ಥಿತವಾಗಿ, ಕ್ಲಪ್ತ ಸಮಯಕ್ಕೆ ಸರಿಹೊಂದಿಸಿ ಕಾರ್ಯಕ್ರಮಗಳನ್ನು ಒಪ್ಪ ಓರಣವಾಗಿ ನೆರವೇರಿಸುವಲ್ಲಿ, ಶ್ರೀಯುತ ಕಶೆಕೋಡಿ ಸೂರ್ಯ ನಾರಾಯಣ ಭಟ್ಟರ “ಕಲಾಶ್ರಯ” ಎಂಬ ಸುವ್ಯವಸ್ಥಿತ ಕಿರು ಸಭಾಭವನದ ಆಯ್ಕೆಯು ಬಹಳ ಸೂಕ್ತ ಮತ್ತು ಆಪ್ತವೆನಿಸುವುದರಲ್ಲಿ ಸಂದೇಹವಿಲ್ಲ.

 

ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ನಿರ್ಮಿತವಾದ ಈ ಸುಸಜ್ಜಿತ ಮಿನಿ ಸಭಾಭವನ ಕಲಾಶ್ರಯ ಕೇಂದ್ರವು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 100 ಮೀ. ದೂರದಲ್ಲಿದ್ದು; ವ್ಯವಸ್ಥಿತ ರೀತಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿದೆ. ಈ ಸಭಾಭವನವು ಹಸಿರು ಸಸ್ಯರಾಶಿಯಿಂದ ಕಂಗೊಳಿಸುವ ಪ್ರಕೃತಿಯ ಸ್ವಚ್ಛ ಪರಿಸರದಲ್ಲಿದ್ದು; ನಗರದ ಗೌಜಿ ಗದ್ದಲದಿಂದ ದೂರದಲ್ಲಿದೆ.

ಇವರ ಈ ಮಿನಿ ಸಭಾಭವನದಲ್ಲಿ ಹೋಮ-ಹವನ, ಪೂಜೆ-ಪುನಸ್ಕಾರ, ಪಾರಾಯಣ, ಪ್ರವಚನ ಮಾತ್ರವಲ್ಲದೆ; ಶ್ರಾದ್ಧಾದಿ (ಪಿತೃ /ತಿಥಿ ) ಕಾರ್ಯಗಳನ್ನು ಮಾಡಲು ಬೇರೆ ಬೇರೆ ಸಭಾಂಗಣಗಳು ವ್ಯವಸ್ಥಿತ ರೀತಿಯಲ್ಲಿ ಇವೆ. ಮಾತ್ರವಲ್ಲದೆ,
ಮುಂಭಾಗದಲ್ಲಿರುವ ಮಂಟಪದಲ್ಲಿ ಪೂಜೆ ಮಾಡಿ, ಆರತಿ ಬೆಳಕಿನಲ್ಲಿ ದೇವರ ಅಲಂಕಾರದ ಸೌಂದರ್ಯವನ್ನು ನೋಡುವ ಸೌಭಾಗ್ಯ ಕೂಡ ಇದೆ. ಕಲಾಶ್ರಯ ಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲದೆ, ಧಾರ್ಮಿಕ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳಿಗೂ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.

ಸ್ವಚ್ಛವಾದ, ಸುಸಜ್ಜಿತ ಸಭಾಭವನದಲ್ಲಿ 40×50 ಅಡಿ ಸಭಾಂಗಣ, ವೇದಿಕೆ, ಊಟ- ಉಪಹಾರಕ್ಕಾಗಿ ವಿಶಾಲವಾದ ಸ್ಥಳ, 150ರಿಂದ 200 ಮಂದಿಗೆ ಸೊಗಸಾದ ಆಸನ ವ್ಯವಸ್ಥೆ, ಧ್ವನಿವರ್ಧಕ, ಊಟಕ್ಕಾಗಿ ಅಚ್ಚುಕಟ್ಟಾದ ಕುರ್ಚಿ ಮೇಜುಗಳು, ಸುಮಾರು 500 ಮಂದಿಗೆ ಅಡುಗೆ ತಯಾರಿಸಲು ಬೇಕಾಗುವ ಅಗತ್ಯ ಪರಿಕರಗಳು, ಅಡುಗೆ ಪಾತ್ರೆಗಳು, ಜನರೇಟರ್ ವ್ಯವಸ್ಥೆ, ಉಳಕೊಳ್ಳಲು 3 ವಸತಿ ಕೊಠಡಿಗಳು, 2 ಡ್ರೆಸ್ಸಿಂಗ್ ಕೊಠಡಿಗಳು, ಸ್ನಾನಗೃಹ, ಶೌಚಾಲಯ, ಕುಡಿಯಲು ಹಾಗೂ ಅಡುಗೆಗೆ ಶುದ್ದೀಕರಿಸಿದ ನೀರು, ಪೂಜೆ, ಹೋಮಾದಿ ವಿವಿಧ ವೈದಿಕ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲಾ ಪಾತ್ರೆ ಸಲಕರಣೆಗಳು ವ್ಯವಸ್ಥಿತ ರೀತಿಯಲ್ಲಿ ಲಭ್ಯವಿವೆ.

ಈ ಎಲ್ಲಾ ಅನುಕೂಲತೆಗಳ ಉಪಯೋಗಕ್ಕೆ ರೂ 15000/- ಮಾತ್ರ ಬಾಡಿಗೆ ಪಡೆಯಲಾಗುವುದು. ಬಹಳ ಮೆಚ್ಚುವಂತಹ ಹಾಗೂ ಹೆಮ್ಮೆ ಪಡುವಂತಹ ವಿಶೇಷ ಗುಣವನ್ನು ಹೊಂದಿದ, ಈ ಕಾರ್ಯ ವ್ಯವಸ್ಥೆಯ ರೂವಾರಿಗಳಾದ ಶ್ರೀಯುತ ಕಶೆಕೋಡಿ ಸೂರ್ಯನಾರಾಯಣ ಭಟ್ಟರ ಮಾತಿನಲ್ಲಿ; ‘ಆರ್ಥಿಕವಾಗಿ ಬಹಳ ದುರ್ಬಲರಾದವರಿಗೆ ಮೇಲಿನ ಎಲ್ಲಾ ವ್ಯವಸ್ಥೆಗಳು ಸಂಪೂರ್ಣ ಉಚಿತ’ ಎನ್ನುವುದು ಪ್ರಶಂಸೆಗೆ ಪಾತ್ರವಾಗಿದೆ.

ಅಗತ್ಯವಿದ್ದಲ್ಲಿ ದಿನಸಿ, ತರಕಾರಿ, ಹಾಲು-ಮೊಸರು. ತುಪ್ಪ, ಸಮಿತ್ತುಗಳು, ವೈದಿಕರು, ಪಾಕಶಾಸ್ತ್ರಜ್ಞರು, ಊಟೋಪಚಾರ, ಪಾನೀಯ ಇತ್ಯಾದಿಗಳ ಪೂರೈಕೆಯ ಸೇವೆಗಾಗಿ ಜನರ ವ್ಯವಸ್ಥೆಯನ್ನೂ ಮಾಡಿಕೊಡುತ್ತಾರೆ. ವಿಶೇಷವಾಗಿ, ಗೋ ಗ್ರಾಸ ನೀಡಲು ಪ್ರತ್ಯಕ್ಷ ಗೋ ಮಾತೆಯೇ ಇಲ್ಲಿ ಇದ್ದಾಳೆ. ಮೊದಲು ಗೋವಿಗೆ ನೀಡಿದ ಬಳಿಕ ನಾವು ಊಟ ಮಾಡುವ ತೃಪ್ತಿ ನಮ್ಮದಾಗುತ್ತದೆ. ಇನ್ನೂ ಮುಖ್ಯವಾಗಿ ಹೇಳಬೇಕಾದರೆ; ಶ್ರೀಯುತ ಸೂರ್ಯನಾರಾಯಣ ಭಟ್ಟರ ಧರ್ಮಪತ್ನಿ, ಮನೆ ಮಹಾಲಕ್ಷ್ಮಿ ಸುಧಾ ಅಕ್ಕನವರು ಬಹಳ ಅಚ್ಚುಕಟ್ಟು, ಶುಭ್ರತೆ, ಸ್ವಚ್ಛ ವ್ಯವಹಾರ, ಭಕ್ತಿ ಪೂರ್ವಕವಾಗಿ ಕಾರ್ಯಕ್ರಮ ನಡೆಸುವಲ್ಲಿ ಸಂಪೂರ್ಣ ಸಹಕಾರ ನೀಡುತ್ತಾರೆ.

ಈ ಸಭಾಭವನದ ಸಮೀಪದಲ್ಲಿ, ಶ್ರೀ ಪಾರ್ವತಿ ಮ್ಯಾನೇಜ್‌ಡ್ ಫಾರ್ಮ್ ಲ್ಯಾಂಡ್ಸ್ ಎಂಬ ಸುಂದರವಾದ ವಸತಿ ಸಮುಚ್ಚಯವು ನೂತನ ತೋಟಗಾರಿಕಾ ಪರಿಕಲ್ಪನೆಯಲ್ಲಿ, ಪ್ರಸಿದ್ಧ ಮುಳಿಯ ಸಂಸ್ಥೆಯಿಂದ ಅಭಿವೃದ್ಧಿಗೊಳ್ಳುತ್ತಲಿದೆ.

ಈ ಸಭಾಭವನವನ್ನು ಅಗತ್ಯವಿರುವವರು ಬಳಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳನ್ನು ಕ್ರಮಬದ್ಧವಾಗಿ ನೆರವೇರಿಸಿ, ಸಂತೃಪ್ತ ಭೋಜನವನ್ನು ನೀಡಿ, ಭಾವನಾತ್ಮಕವಾದ ಮಾನಸಿಕ ನೆಮ್ಮದಿ ಪಡೆಯಬಹುದು.

ಬರಹ:ಕೇಶವಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿ ಪ್ರಸಾದ್ ದಂಪತಿಗಳು