Friday, September 20, 2024
ಸುದ್ದಿ

ಟಿಪ್ಪು ಜಯಂತಿ ಆಚರಣೆ ಬದಲು ಪ್ರಕೃತಿ ವಿಕೋಪದ ಸಂತ್ರಸ್ತರ ಕಲ್ಯಾಣಕ್ಕೆ ವಿನಿಯೋಗಿಸಿ: ಸಿಎನ್‍ಸಿ ಒತ್ತಾಯ – ಕಹಳೆ ನ್ಯೂಸ್

ಮಡಿಕೇರಿ: ಟಿಪ್ಪು ಜಯಂತಿ ಆಚರಣೆ ಬದಲು ಅದಕ್ಕೆ ವಿನಿಯೋಗಿಸುತ್ತಿರುವ ನೂರಾರು ಕೋಟಿ ರೂ. ಹಣವನ್ನು ಪ್ರಕೃತಿ ವಿಕೋಪದ ಸಂತ್ರಸ್ತರ ಕಲ್ಯಾಣಕ್ಕೆ ವಿನಿಯೋಗಿಸುವ ಮೂಲಕ ಸರಕಾರ ಪುಣ್ಯ ಕಟ್ಟಿಕೊಳ್ಳಲಿ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವರ ಗಾಯದ ಮೇಲೆ ಉಪ್ಪು ಸವರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ, ಈ ಕಾರ್ಯವನ್ನು ಕೈಬಿಟ್ಟು ಟಿಪ್ಪು ಮತ್ತವನ ಪಾತಕಿ ಸೈನಿಕರಿಂದ ನರಮೇಧಕ್ಕೊಳಗಾದ ದೇವಟ್ ಪರಂಬ್‍ನಲ್ಲಿ ರಾಷ್ಟ್ರೀಯ ಸ್ಮಾರಕ ಸ್ಥಾಪಿಸಿ ಕೊಡವರಿಗೆ ಶ್ರದ್ಧಾಂಜಲಿ ಅರ್ಪಿಸುವ ದೊಡ್ಡ ಮನಸ್ಸು ಮಾಡಲಿ ಎಂದು ಒತ್ತಾಯಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಡವ ಎನ್ನುವ ಒಂದು ಜನಾಂಗವೇ ಅಳಿದು ಹೋದ ದುರ್ಘಟನೆ ನಡೆದ ಕೊಡಗಿನಲ್ಲಿ ಟಿಪ್ಪುವಿನ ವೈಭವೀಕರಣ ಸಲ್ಲದು. ರಾಜೇಂದ್ರ ಚೋಳರ ಆಳ್ವಿಕೆ ಕಾಲದಲ್ಲಿ ನಿರ್ಮಿಸಲ್ಪಟ್ಟ 300ಕ್ಕೂ ಅಧಿಕ ಶೈವ ಶಿಲ್ಪಕಲೆಯನ್ನು ಹೊಂದಿದ ದೇವನೆಲೆಗಳು ಕೊಡಗಿನಲ್ಲಿದ್ದವು. ಅವೆಲ್ಲವೂ ಟಿಪ್ಪುವಿನಿಂದ ಧ್ವಂಸವಾಗಿದೆ. ಕೊಡಗಿನಲ್ಲಿ ಭಾಗಮಂಡಲ, ಮಲೆತಿರಿಕೆ, ನೂರಕ್ಕನಾಡ್ ಸೇರಿದಂತೆ ನೂರಾರು ದೇಗುಲಗಳನ್ನು ಧ್ವಂಸ ಮಾಡಿದ್ದು ಚರಿತ್ರೆಯಲ್ಲಿದೆ.

ಜಾಹೀರಾತು

ಮಲಬಾರ್ ಪ್ರಾಂತದ ಯೋಧ ಜನಾಂಗವಾದ ನಾಯರುಗಳನ್ನು, ಚಿತ್ರದುರ್ಗದ ವಾಲ್ಮಿಕಿ ಬೇಡ ನಾಯಕರನ್ನು ಮತ್ತು ಮಂಗಳೂರಿನ ಕ್ಯಾಥೋಲಿಕರನ್ನು, ಗೌಡ ಸಾರಸ್ವತ ಕೊಂಕಣಿಗರನ್ನು, ಮೇಲುಕೊಟೆ ಅಯ್ಯಂಗಾರ್ ಗಳನ್ನು, ಕುಂಭಕೋಣಂನ ಅಯ್ಯರ್ ಗಳನ್ನು ಕೂಡ ಈತ ಬರ್ಬರವಾಗಿ ಹತ್ಯಾಕಾಂಡ ನಡೆಸಿದ್ದಾನೆ. ಇದೆಲ್ಲವನ್ನು ಟಿಪ್ಪುವಿನ ಆಸ್ಥಾನದ ಇತಿಹಾಸಕಾರ ಮೀರ್ ಉಸ್ಮಾನ್ ಆಲಿ ಕಿರ್ಮಾನಿಯೇ ಸ್ವತಃ ದಾಖಲಿಸಿರುವುದು ಬೆಳಕಿಗೆ ಬಂದಿದೆ.

ದೇಶದ ಮುಸಲ್ಮಾನ ನವಾಬರು ಟಿಪ್ಪುವಿನ ದುಷ್ಟ ಗುಣವನ್ನು ದ್ವೇಷಿಸುತ್ತಿದ್ದರು. ಲಿಂಗಾಯತ ಅರಸರು ಟಿಪ್ಪುವಿನ ಪರಮ ದ್ವೇಷಿಗಳಾಗಿದ್ದರು, ಆ ಕಾರಣಕ್ಕೆ ಇಡೀ ಲಿಂಗಾಯಿತ ಸಮುದಾಯವೇ ದೇಶ ದ್ರೋಹಿಗಳೆ, ಟಿಪ್ಪುವಿನ ವಿರುದ್ದ ಸಮರ್ಥವಾಗಿ ಕಾದಾಡಿ ಕೊಡಗು ನೆಲದ ಸ್ವಾತಂತ್ರ್ಯಕ್ಕಾಗಿ ನೆತ್ತರು ಹರಿಸಿದ ಅಪ್ಪಚ್ಚಿರ ಮಂದಣ್ಣ, ಕುಲ್ಲೇಟಿರ ಪೊನ್ನಣ್ಣ ಮತ್ತು ಕನ್ನಂಡ ದೊಡ್ಡಯ್ಯ ಮುಂತಾದ ಅಮರ ಸೇನಾನಿಗಳು ದೇಶ ದ್ರೋಹಿಗಳೇ ಎಂದು ನಾಚಪ್ಪ ಪ್ರಶ್ನಿಸಿದರು.

ಟಿಪ್ಪುವಿನಿಂದ ಹತ್ಯಾಕಾಂಡಕ್ಕೊಳಗಾದ ಸಂತತಿ ಇಂದು ಅತಿವೃಷ್ಟಿ ಹಾನಿಯಿಂದ ನಲುಗಿ ಹೋಗಿದೆ. ಪರಿಸ್ಥಿತಿ ಹೀಗಿರುವಾಗ ಟಿಪ್ಪು ಜಯಂತಿಯನ್ನು ನಮ್ಮ ಮೇಲೆ ಹೇರುವ ಪ್ರಯತ್ನವನ್ನು ಸರಕಾರ ಮಾಡಬಾರದು. ಬದಲಿಗೆ ಜಯಂತಿಗಾಗಿ ವಿನಿಯೋಗಿಸುವ ಹಣವನ್ನು ಮುಖ್ಯಮಂತ್ರಿಗಳು ಸಂತ್ರಸ್ತ ಕೊಡಗು ಜಿಲ್ಲೆಗೆ ನೀಡಲಿ ಎಂದು ಒತ್ತಾಯಿಸಿದರು.

ದೇಶಪ್ರೇಮಿ ಕೊಡವರನ್ನು ಎಷ್ಟೆಲ್ಲಾ ಸಾಧ್ಯವಿದೆಯೋ ಅಷ್ಟೆಲ್ಲಾ ಅವಮಾನಿಸಿ ಹಿಂಸಿಸಲು ಹಳೆ ಮೈಸೂರು ಪ್ರದೇಶದ ಪ್ರಧಾನ ಗುರು ಪೀಠವೊಂದು ತೆರೆಮರೆಯಲ್ಲಿ ಸಂಚು ನಡೆಸುತ್ತಿದೆ ಎಂದು ನಾಚಪ್ಪ ಇದೇ ಸಂದರ್ಭ ಆರೋಪಿಸಿದರು.