ಮೈಸೂರು ದಸರಾ : ಅರಮನೆಯಲ್ಲಿ ಕಿತ್ತಾಡಿಕೊಂಡ ಆನೆಗಳು, ದಿಕ್ಕಾಪಾಲಾಗಿ ಓಡಿದ ಪ್ರವಾಸಿಗರು..! – ಕಹಳೆ ನ್ಯೂಸ್
ಅರಮನೆ ಅಂಗಳ ಬಿಟ್ಟು ಎರಡು ಆನೆಗಳು ರಸ್ತೆಗೆ ನುಗ್ಗಿವೆ. ಹೀಗಾಗಿ ಆನೆ ನಿಯಂತ್ರಿಸಲು ಸ್ವತಃ ಮಾವುತನೇ ವಿಫಲನಾಗಿ ಆನೆ ಬಿಟ್ಟು ಕೆಳಗೆ ಇಳಿದಿದ್ದಾನೆ. ಆಹಾರ ಸೇವಿಸುವ ಸಂದರ್ಭ ಧನಂಜಯ ಹಾಗೂ ಕಂಜನ್ ಎಂಬ ಎರಡು ಆನೆಗಳು ಕಿತ್ತಾಡಿಕೊಂಡಿವೆ. ಕಂಜನ್ ಆನೆಗೆ ಧನಂಜಯ ಆನೆ ಕೋಪದಿಂದ ತಿವಿದಿದ್ದಾನೆ. ಇದರಿಂದ ಹೆದರಿದ ಕಂಜನ್ ಆನೆ ಅರಮನೆ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಓಡಾಡಿದೆ. ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಧನಂಜಯ ಆನೆಯ ಕೋಪಕ್ಕೆ ಹೆದರಿ ಅರಮನೆಯಿಂದ ಕಂಜನ್ ಆನೆ ಹೊರಗೆ ಓಡಿ ಬಂದಿದೆ. ಧನಂಜಯ ಕೂಡ ಬಿಟ್ಟು ಬಿಡದೆ ಕಂಜನ್ ನನ್ನು ಅಟ್ಟಾಡಿಸಿಕೊಂಡು ಓಡಿದ್ದಾನೆ. ಆನೆಗಳ ಕಿತ್ತಾಟದಿಂದ ಬೆದರಿ ಕಂಜನ್ ಆನೆ ಬಿಟ್ಟು ಮಾವುತ ಇಳಿದಿದ್ದಾನೆ. ಕೋಡಿ ಸೋಮೇಶ್ವರ ದೇವಸ್ಥಾದಿಂದ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆಯಿಂದ ಆನೆಗಳು ಹೊರಗೆ ಬಂದಿವೆ. ಜಯಮಾರ್ತಾಂಡ ಗೇಟ್ ಬಳಿ ಇದ್ದ ಬ್ಯಾರಿಕೇಡ್ ಬಿಸಾಡಿ ಆನೆಗಳು ನುಗ್ಗಿವೆ. ಫುಟ್‌ಪಾತ್ ಮೇಲಿದ್ದ ಅಂಗಡಿಗಳ ಮೇಲೂ ದಾಳಿ ಮಾಡಿವೆ. ಕೊನೆಗೆ ಅರಮನೆ ಮುಂಭಾಗದ ಮುಖ್ಯ ರಸ್ತೆವರೆಗೆ ಅಟ್ಟಾಡಿಸಿಕೊಂಡು ಆನೆ ಓಡಿದೆ. ಆನೆಗಳ ಕಿತ್ತಾಟದಿಂದ ಪ್ರವಾಸಿಗರು ಚೆಲ್ಲಾಪಿಲ್ಲಿಯಾಗಿ ಓಡಾಡಿದ್ದಾರೆ. ಜಂಬೂ ಸವಾರಿ ಆನೆಗಳ ನಿರ್ವಹಣೆಯಲ್ಲಿ ಅರಣ್ಯ ಅಧಿಕಾರಿ, ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಅರಮನೆ ಅಂಗಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.