Recent Posts

Saturday, September 21, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ನರೇಂದ್ರ ಪ.ಪೂ ಕಾಲೇಜಿನಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ವಾಲಿಬಾಲ್ ಪಂದ್ಯಾಟದ ಸಮಾರೋಪ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : “ಶಿಕ್ಷಣ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೈಹಿಕ ಶಿಕ್ಷಣವು ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ದೈಹಿಕ ಶಿಕ್ಷಣವು ಕಲಿಕಾ ಪ್ರಗತಿಗೆ ಪೂರಕವಾದ ವ್ಯವಸ್ಥೆಯನ್ನು ಮಾಡಿಕೊಡುತ್ತದೆ. ಕ್ರೀಡೆಯಲ್ಲಿ ಬರೀ ಸೋಲು ಗೆಲುವು ಮಾತ್ರವಲ್ಲದೆ ಪರಸ್ಪರರನ್ನು ಅರಿತು, ಕಲೆತು, ಹೊಂದಾಣಿಕೆ ಮಾಡಿಕೊಳ್ಳುವ ಪರಸ್ಪರ ಪ್ರೀತಿ, ವಿಶ್ವಾಸದ ಭಾವವನ್ನು ಭಾವೈಕ್ಯತೆಯನ್ನು ಕ್ರೀಡೆಗಳು ಕಲಿಸುತ್ತವೆ. ಹಾಗಾಗಿ ಇನ್ನೂ ಹಲವು ಯೋಜನೆಗಳ ಮೂಲಕ ಸರಕಾರ ಇದಕ್ಕೆ ಪ್ರೋತ್ಸಾಹ ನೀಡಬೇಕು. ”ಎಂದು ಪುತ್ತೂರು ನಗರಸಭೆಯ ಉಪಾಧ್ಯಕ್ಷರಾದ ಕೆ. ಬಾಲಚಂದ್ರ ಇವರು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮಂಗಳೂರು ಮತ್ತು ನರೇಂದ್ರ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನರೇಂದ್ರ ಪದವಿ ಪೂರ್ವಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ದೀಪಾನಾಯಕ್ ರವರು ಮಾತನಾಡುತ್ತಾ “ಕ್ರೀಡೆಗಳ ಸ್ಪರ್ಧಾತ್ಮಕ ಸ್ವಭಾವವು ಆರೋಗ್ಯಕರ ಆತ್ಮವಿಶ್ವಾಸ ಮತ್ತು ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಇದು ಜನರನ್ನು ನ್ಯಾಯಯುತವಾಗಿ ಪರಿಗಣಿಸುವ ಸದ್ಗುಣಗಳನ್ನು ಅಭಿವೃದ್ಧಿಪಡಿಸುತ್ತದೆ. ವೈಫಲ್ಯವನ್ನು ಧೈರ್ಯದಿಂದ ಎದುರಿಸುವ ಮತ್ತು ಯಶಸ್ಸಿನ ಶ್ರೇಯವನ್ನು ಹಂಚಿಕೊಳ್ಳುವ ಭಾವನಾತ್ಮಕ ಶಕ್ತಿಯನ್ನು ಇದು ನಿರ್ಮಿಸುತ್ತದೆ. ಇಂತಹ ಪಂದ್ಯಾಟಗಳು ವಿದ್ಯಾರ್ಥಿಗಳಿಗೆ ಜೀವನದ ಅಮೂಲ್ಯ ಪಾಠಗಳನ್ನು ಕಲಿಸುತ್ತವೆ” ಎಂದು ಹೇಳಿದರು.

ಜಾಹೀರಾತು

ಈ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕುಂಬ್ರ ಇದರ ಬಾಲಕಿಯರ ತಂಡ ಪ್ರಥಮ ಸ್ಥಾನ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ಬಾಲಕಿಯರ ತಂಡ ದ್ವಿತೀಯ ಸ್ಥಾನ, ಬಾಲಕರ ವಿಭಾಗದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ಪ್ರಥಮ ಸ್ಥಾನ, ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ವೇದಿಕೆಯಲ್ಲಿ ನರೇಂದ್ರ ಪದವಿ ಪೂರ್ವಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಂತೋಷ ಬಿ., ಷಣ್ಮುಖದೇವ ವಿದ್ಯಾಸಂಸ್ಥೆ ಪೆರ್ಲಂಪಾಡಿ ಇದರ ಸಂಚಾಲಕರಾದ ಶಿವರಾಮ ಭಟ್ ಉಪಸ್ಥಿತರಿದ್ದರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ , ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಯತೀಶ್, ಪಟ್ಟೆ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮೋನಪ್ಪ , ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇದರ ದೈಹಿಕ ಶಿಕ್ಷಣ ಶಿಕ್ಷಕರಾದ ನಂದಕುಮಾರ್ ಸಹಕರಿಸಿದರು.

ಈ ಸಮಾರಂಭದಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ಕಾಲೇಜಿನ ಕ್ರೀಡಾಸಂಘದ ನಾಯಕರಾದ, ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಸಿಂಚನಾ ಬಿ. ವಂದಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ಆಶಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.