ಕಷ್ಟದಲ್ಲಿರುವಾಗ ದೇವರು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ, ಪುಟ್ಟ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದಾಗ ಸಾಕ್ಷಾತ್ ಹನುಮಂತನಂತೆಯೇ ಕೋತಿಗಳು ಬಂದು ಬಾಲಕಿಯನ್ನು ರಕ್ಷಿಸಿವೆ. ಆಕೆ ಸುರಕ್ಷಿತವಾಗಿ ಮನೆಗೆ ಸೇರಿದ್ದಾಳೆ.
ದೇವರಂತೆ ಬಂದ ಕೋತಿಗಳು ಬಾಲಕಿ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಯತ್ನವನ್ನು ತಪ್ಪಿಸಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ. 6 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಕೋತಿಗಳ ಗುಂಪೊಂದು ಆ ವ್ಯಕ್ತಿಯ ಮೇಲೆ ದಾಳಿ ನಡೆಸಿವೆ.
ಯುಕೆಜಿ ವಿದ್ಯಾರ್ಥಿನಿ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿ ಪೋಷಕರಿಗೆ ಈ ವಿಚಾರವನ್ನು ವಿವರಿಸಿದ್ದಾಳೆ. ಕೋತಿಗಳು ತನ್ನ ಪ್ರಾಣವನ್ನು ಉಳಿಸಿರುವುದಾಗಿ ಹೇಳಿದ್ದಾಳೆ. ಸೆಪ್ಟೆಂಬರ್ 20ರಂದು ಬಾಗ್ಪತ್ನ ದೌಲಾ ಗ್ರಾಮದಲ್ಲಿ ಘಟನೆ ನಡೆದಿದೆ, ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪರಾರಿಯಾಗಿದ್ದ ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.
ಪೊಲೀಸರ ಪ್ರಕಾರ ಆರೋಪಿ ಬಾಲಕಿಯನ್ನು ಅಪಹರಿಸಿ, ಒಂದೆಡೆ ಕರೆದೊಯ್ದು ಆಕೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ್ದರು. ಇದ್ದಕ್ಕಿದ್ದಂತೆ ಕೋತಿಗಳು ಸ್ಥಳಕ್ಕೆ ಬಂದಿದ್ದವು, ಆ ಕೋತಿಗಳನ್ನು ನೋಡಿ ಆರೋಪಿ ಪರಾರಿಯಾಗಿದ್ದಾನೆ.
ಗ್ರಾಮದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಆರೋಪಿ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ದೃಶ್ಯಾವಳಿಗಳಿಂದ ಆರೋಪಿ ಪತ್ತೆಗೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.
ಆತ ಬೇರೆ ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಮನೆಯ ಹೊರಗೆ ಆಟವಾಡುತ್ತಿರುವುದನ್ನು ಗಮನಿಸಿದ ಆತ ತನ್ನೊಂದಿಗೆ ಬರುವಂತೆ ಮನವೊಲಿಸಿದ್ದ ಎಂದು ಅವರು ತಿಳಿಸಿದ್ದಾರೆ.
ವಿರೋಧಿಸಿದರೆ ತನ್ನನ್ನು ಮತ್ತು ತನ್ನ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಗಿ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಕೋತಿಗಳ ದಾಳಿಯ ನಂತರ, ತಪ್ಪಿಸಿಕೊಂಡು ಹುಡುಗಿ ಮನೆಗೆ ಓಡಿ ಬಂದು ಘಟನೆಯ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮನೆಯವರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.