ಬಿಸಿರೋಡು – ಅಡ್ಡಹೊಳೆವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಅಂಡರ್ ಪಾಸ್ ನ ಮೇಲಿನಿಂದ ಸರ್ವೀಸ್ ರಸ್ತೆಗೆ ಬೀಳುತ್ತಿರುವ ಬೆಂಕಿಯುಂಡೆಗಳು – ಕಹಳೆ ನ್ಯೂಸ್
ಬಂಟ್ವಾಳ: ಬಿಸಿರೋಡು – ಅಡ್ಡಹೊಳೆವರೆಗೆ ನಡೆಯುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಮೆಲ್ಕಾರ್ ನಲ್ಲಿ ಅಂಡರ್ ಪಾಸ್ ನ ಮೇಲಿನಿಂದ ಸರ್ವೀಸ್ ರಸ್ತೆಗೆ ಬೆಂಕಿಯುಂಡೆಗಳು ಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದ್ದು, ಅಜಾಗರೂಕತೆಯಿಂದ ಮಾಡುವ ಕಾಮಗಾರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿವೆ.
ಮೆಲ್ಕಾರ್ ನಲ್ಲಿ ಅಂಡರ್ ಪಾಸ್ ಕಾಮಗಾರಿ ಭರದಿಂದ ಸಾಗುತ್ತಿದ್ದು, ರಸ್ತೆಯ ಎರಡು ಸೈಡ್ ಗಳಿಗೆ ರಕ್ಷಣಾ ಬೇಲಿ ಅಂದರೆ ತಡೆ ಬೇಲಿಯನ್ನು ನಿರ್ಮಿಸಲು ಕಬ್ಬಿಣದ ರಾಡ್ ಗಳನ್ನು ವೆಲ್ಡಿಂಗ್ ಮಾಡಲಾಗುತ್ತಿದೆ. ಈ ವೇಳೆ ವೆಲ್ಡಿಂಗ್ ನ ಬೆಂಕಿಯುಂಡೆಗಳು ಮೇಲ್ಭಾಗದಿಂದ ಕೆಳಕ್ಕೆ ಸರ್ವೀಸ್ ರಸ್ತೆಗೆ ಬೀಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಸರ್ವೀಸ್ ರಸ್ತೆಯಲ್ಲಿ ಸಂಚಾರ ಮಾಡುವ ದ್ವಿಚಕ್ರವಾಹನ ಸವಾರರಿಗೆ ಇದು ಅಪಾಯ ತಪ್ಪಿದ್ದಲ್ಲ ಎಂಬ ಆತಂಕ ವ್ಯಕ್ತವಾಗಿವೆ. ಬೆಂಕಿಯುಂಡೆಗಳಿಂದ ಪ್ರಾಣಹಾನಿಯಾಗುವ ಸಂಭವಿದ್ದು , ಸೇಫ್ಟಿ ಬಳಸಿಕೊಂಡು ಕಾಮಗಾರಿ ನಡೆಸುವಂತೆ ಸಾರ್ವಜನಿಕ ರು ಒತ್ತಾಯ ಮಾಡಿದ್ದಾರೆ.
ಮೆಲ್ಕಾರ್ ಭಾಗದಲ್ಲಿ ಅನೇಕ ಅಂಗಡಿಗಳಿದ್ದು ಬೆಂಕಿಯ ಜ್ವಾಲೆಗಳಿಂದ ಅಪಾಯ ಸಂಭವಿಸವಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕಾಮಗಾರಿ ನಡೆಸುವ ಕೆ.ಎನ್.ಆರ್.ಸಿ.ಕಂಪೆನಿ ಈ ಬಗ್ಗೆ ವಿಶೇಷ ಕಾಳಜಿವಹಿಸಿ ಅಪಾಯವಾಗದಂತೆ ಕಾಮಗಾರಿ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.