ಕಲ್ಲಡ್ಕ :ನೂತನವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ದಂಪತಿಗಳಿಗೆ ಆಯೋಜಿಸಿದ ಕಾರ್ಯಕ್ರಮ ನವದಂಪತಿ ಸಮಾವೇಶವು ತಳಿರು ತೋರಣಗಳಿಂದ ಅಲಂಕೃತಗೊಂಡ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಕುಟುಂಬ ಪ್ರಭೋದನ್ ಸಹಸಂಯೋಜಕರಾದ ಶ್ರೀ ಸುಬ್ರಾಯ ನಂದೋಡಿ ಮತ್ತು ಶ್ರೀಮತಿ ಜಯಲಕ್ಷ್ಮೀ ನಂದೋಡಿ ಹಿರಿಯ ದಂಪತಿಗಳಾಗಿ ಉಪಸ್ಥಿತರಿದ್ದು, ಪ್ರಭು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕ ಮಾಡಿ ಪುಷ್ಪಾರ್ಚನೆಗೈಯ್ಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ತಮ್ಮ ಜೀವನದ ಅನುಭವನಗಳನ್ನು ಹಂಚಿಕೊಂಡರು.
ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಇವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾಸ್ತಾವಿಕ ಮಾತನಾಡಿದರು. ಧರ್ಮ ಸಂಸ್ಕೃತಿಯ ಕೇಂದ್ರ ಬಿಂದುವಾದ ನಮ್ಮ ಮನೆ, ನಮ್ಮ ಕುಟುಂಬವನ್ನು ನಾವು ರಕ್ಷಣೆ ಮಾಡಬೇಕು. ಹಿಂದೂ ಸಮಾಜ ಉಳಿದಿರುವುದು ಪರಸ್ಪರ ತಿಳುವಳಿಕೆಯಿಂದ ಎಂದು ಹಿಂದೂ ಸಮಾಜದ ಬಗ್ಗೆ ತಿಳಿಸಿದರು.
ಗಜಾನನ ಪೈ ಇವರು ಮಾತನಾಡಿ ನಾವು ಧರ್ಮದ ರೀತಿಯಲ್ಲಿ ನಡೆಯುವಂತಹ ಪ್ರಜೆಗಳು ನಮ್ಮದು ಸನಾತನ ಸಂಸ್ಕೃತಿ ಪೀಳಿಗೆಯಿಂದ ಪೀಳಿಗೆಗೆ ನಡೆದುಕೊಂಡು ಬಂದಿದೆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಅದಕ್ಕೆ ಬೇಕಾದಂತಹ ಸಂಸ್ಕಾರ ಕೊಡಬೇಕು ಎಂದು ಹೇಳಿದರು. ಸಮಾರೋಪ ಸಮಾರಂಭದಲ್ಲಿ ಸು.ರಾಮಣ್ಣನವರು ದಂಪತಿಗಳಿಂದ ಓಂಕಾರ ಮತ್ತು ರಾಮತಾರಕ ಮಂತ್ರವನ್ನು ಹೇಳಿಸಿದರು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಸಂಸಾರ ಪಥದಲ್ಲಿ ಸಾಗುವಾಗ ದಂಪತಿಗಳಲ್ಲಿ ತಾಳ್ಮೆ, ಹೊಂದಾಣಿಕೆ, ಪರಸ್ಪರ ಅರ್ಥೈಯಿಸಿಕೊಳ್ಳುವುದು ತುಂಬಾ ಅಗತ್ಯವೆಂದು ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮ ದಲ್ಲಿ 52 ದಂಪತಿಗಳು ಭಾಗವಹಿಸಿದ್ದು, ಬಂದಿರುವ ಎಲ್ಲಾ ನವದಂಪತಿಗಳ ಪಾದ ತೊಳೆದು ಸ್ವಾಗತಿಸಿ, ಅಗ್ನಿ ಕುಂಡಕ್ಕೆ ಅರ್ಘ್ಯ ಅರ್ಪಿಸಿ ದಂಪತಿಗಳನ್ನು ಶಿಶುಮಂದಿರದ ಗುಹೆಯ ಮೂಲಕ ವೇದಘೋಷದೊಂದಿಗೆ ವೇದವ್ಯಾಸ ಸಭಾಂಗಣಕ್ಕೆ ಕರೆದೊಯ್ಯಲಾಯಿತು. ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಡಾ| ಕಮಲಾ ಭಟ್ ಹಾಗೂ ಶ್ರೀಮತಿ ಸುಮಿತಾ ಪೈ., ಸಹಸಂಚಾಲಕರಾದ ರಮೇಶ್ ಎನ್., ಉಪಸ್ಥಿತರಿದ್ದರು.