50 ರೂಪಾಯಿಗೆ ಏರಿಕೆಯಾದ ತೆಂಗಿನ ಕಾಯಿ ಬೆಲೆ ; ರೈತರಿಗೆ ಪ್ರಯೋಜನಕ್ಕೆ ಬಾರದ ಬೆಲೆ ಏರಿಕೆ – ಕಹಳೆ ನ್ಯೂಸ್
ಅದರ ಜೊತೆಗೆ ಕೊಬ್ಬರಿ, ಕೊಬ್ಬರಿ ಎಣ್ಣೆಗೂ ಬೇಡಿಕೆ ಬಂದಿದೆ. ಹೀಗಾಗಿ ಕೊಬ್ಬರಿ, ತೆಂಗಿನ ಕಾಯಿ ಬೆಲೆಯಲ್ಲೂ ದಿಢೀರ್ ಏರಿಕೆ ಕಂಡುಬಂದಿದ್ದು, ರೈತರು ಮತ್ತು ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಇಷ್ಟೂ ಸಮಯಗಳ ಕಾಲ ಕಡಿಮೆ ಬೆಲೆಗೇ ಮಾರಾಟ ಮಾಡುತ್ತಿದ್ದ ಕೃಷಿಕರಿಗೆ ಈಗ ಧಾರಣೆ ಏರಿಕೆ ಖುಷಿ ನೀಡಿದೆ. ಆದರೆ ಬೆಳೆ ಇಲ್ಲದೆ ಧಾರಣೆ ಮಾತ್ರಾ ನೋಡುವಂತಾಗಿದೆ.
ಕರಾವಳಿ ಇತಿಹಾಸದಲ್ಲಿ ಈವರೆಗಿನ ಗರಿಷ್ಠ ಬೆಲೆ 42 ರೂ. ಆಗಿದ್ದು, 3 ವರ್ಷ ಹಿಂದೆ ಈ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇನ್ನು 4-5 ತಿಂಗಳ ವರೆಗೆ ಭಾರೀ ಬೇಡಿಕೆಯಿದ್ದರೂ ಬೇಡಿಕೆಯಷ್ಟು ತೆಂಗಿನ ಕಾಯಿ ಇಲ್ಲದ ಕಾರಣ 60 ರೂ. ಗಡಿ ದಾಟಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. 15 ದಿನಗಳ ಹಿಂದೆ ಒಂದು ಕೆಜಿ ತೆಂಗಿನಕಾಯಿಗೆ 28-30 ರೂ. ಇದ್ದಿತ್ತು. ಆದರೆ ಈಗ ಹಬ್ಬಗಳ ಋತು ಕೂಡ ಆರಂಭಗೊಂಡಿದ್ದು, ಎಣ್ಣೆ ಮಿಲ್‌ಗಳಿಂದಲೂ ಬೇಡಿಕೆ ಹೆಚ್ಚುತ್ತಿ ರುವುದರಿಂದ 15 ದಿನಗಳಲ್ಲೇ 15-20 ರೂ. ಏರಿಕೆಯಾಗಿದೆ. 20 ವರ್ಷಗಳಿಂದ ತೆಂಗಿನಕಾಯಿ ಬೆಲೆ ಇಷ್ಟು ಏರಿದ್ದಿಲ್ಲ.
ಈ ಧಾರಣೆ ಏರಿಕೆ ತಾತ್ಕಾಲಿಕವಾಗಿದ್ದು ಬೇಡಿಕೆಯ ಕಾರಣದಿಂದ ಪೂರೈಕೆ ಇಲ್ಲದೆಯೇ ಧಾರಣೆ ಏರಿಕೆ ಕಂಡುಬಂದಿದೆ. ಹವಾಮಾನ ವೈಪರೀತ್ಯ ಇದೇ ಮಾದರಿ ಮುಂದುವರಿದಿದೆ ಧಾರಣೆ ಏರಿಕೆಯೂ ಮುಂದುವರಿಯುವ ಸಾಧ್ಯತೆ ಇದೆ. ತೆಂಗಿನ ಮಾರುಕಟ್ಟೆ ವಲಯದ ಎಲ್ಲಿ ಕೇಳಿದರೂ ನಿರೀಕ್ಷಿತ ಪ್ರಮಾಣದಲ್ಲಿ ತೆಂಗಿನಕಾಯಿ ಲಭ್ಯವಿಲ್ಲ. ಮಾರುಕಟ್ಟೆ ವಿಶ್ಲೇಷಣೆಗಳ ಪ್ರಕಾರ, ತೆಂಗು ಬೆಳೆಯುವ ಪ್ರದೇಶಗಳಲ್ಲಿ ಈ ಬಾರಿ ಎಳನೀರನ್ನು ಹೆಚ್ಚಾಗಿ ತೆಗೆಯಲಾಗಿದೆ. ಬೇಸಗೆಯಲ್ಲಿ ವಿಪರೀತ ತಾಪಮಾನದ ಕಾರಣದಿಂದ ಎಳನೀರಿಗೆ ಬೇಡಿಕೆ ಇತ್ತು. ಹೀಗಾಗಿ ಎಳನೀರನ್ನೇ ರೈತರು ತೆಗೆದು ಮಾರಾಟ ಮಾಡಿದ್ದರು. ಈಗ ತೆಂಗಿನ ಕಾಯಿ ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಪೂರೈಕೆ ಮಾಡಲು ತೆಂಗಿನಕಾಯಿಯೇ ಇಲ್ಲವಾಗಿದೆ. ಕರ್ನಾಟಕದಲ್ಲಿ ಬರಗಾಲದಂತಹ ಪರಿಸ್ಥಿತಿಗಳು ತೆಂಗಿನ ಉತ್ಪಾದನೆಯನ್ನು ಕಡಿಮೆ ಮಾಡಿದೆ ಕೂಡಾ. ಇನ್ನು ಕರಾವಳಿ ಭಾಗದಲ್ಲಿ ತೆಂಗಿನ ಕಾಯಿಗೆ ಮಂಗಗಳ ಕಾಟದಿಂದ ಶೇ.50 ರಷ್ಟು ಪ್ರತೀ ಬಾರಿಯೂ ಇಳುವರಿ ಕಡಿಮೆಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಒಟ್ಟಾರೆ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಬೆಳೆಯಿದ್ದು, ಅಂದಾಜು ಒಂದೂವರೆ ಲಕ್ಷ (ಅರ್ಧ ಎಕರೆಗಿಂತ ಹೆಚ್ಚಿರುವವರು) ಬೆಳೆಗಾರರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅಂದಾಜು 60 ಸಾವಿರ ಹಾಗೂ ದ.ಕ. ಜಿಲ್ಲೆಯಲ್ಲಿ 80 ಸಾವಿರಕ್ಕೂ ಮಿಕ್ಕಿ ತೆಂಗು ಬೆಳೆಗಾರರಿದ್ದಾರೆ. ಹವಾಮಾನ ವೈಪರೀತ್ಯ ಕಾರಣದಿಂದ ಇಳುವರಿ ಕೊರತೆಯೇ ಈಗಿನ ಧಾರಣೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.