ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲು : ಎ1 ನಿರ್ಮಲಾ ಸೀತಾರಾಮನ್, ಎ4 ನಳಿನ್ ಕುಮಾರ್ ಕಟೀಲ್, ಎ5 ಬಿ.ವೈ.ವಿಜಯೇಂದ್ರ…!! – ಕಹಳೆ ನ್ಯೂಸ್
ಬೆಂಗಳೂರು: ಚುನಾವಣಾ ಬಾಂಡ್ ಮೂಲಕ ಸುಲಿಗೆ ಮಾಡಿರುವ ಆರೋಪಕ್ಕಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಬೆನ್ನಲ್ಲೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಿರ್ಮಲಾ ಸೀತಾರಾಮನ್ ಸೇರಿ ಹಲವರು ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂ. ಹಣ ಸುಲಿಗೆ ಮಾಡಿದ್ದಾರೆಂದು ಆರೋಪಿಸಿ ಆದರ್ಶ್ ಐಯ್ಯರ್ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಆದೇಶದ ಬೆನ್ನಲ್ಲೇ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಒಟ್ಟು ಐವರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಸೀತಾರಾಮನ್ ಅವರು ಎ1 ಆರೋಪಿಯಾಗಿದ್ದಾರೆ.
ಇಡಿ ಅಧಿಕಾರಿಗಳು ಎ2, ಕೇಂದ್ರ ಬಿಜೆಪಿ ಪದಾಧಿಕಾರಿಗಳು ಎ3, ನಳಿನ್ ಕುಮಾರ್ ಕಟೀಲ್ ಎ4, ಬಿ.ವೈ.ವಿಜಯೇಂದ್ರ ಎ5, ರಾಜ್ಯ ಬಿಜೆಪಿ ಪದಾಧಿಕಾರಿಗಳು ಎ6 ಆರೋಪಿಗಳಾಗಿದ್ದಾರೆ. ಐಪಿಸಿ ಸೆಕ್ಷನ್ 384 (ಸುಲಿಗೆ), 120b (ಅಪರಾಧಿಕ ಒಳಸಂಚು), 34 (ಸಮಾನ ಉದ್ದೇಶ) ಮೇಲೆ ಕೇಸ್ ದಾಖಲಾಗಿದೆ.
2019 ಏಪ್ರಿಲ್ ತಿಂಗಳಿನಿಂದ 2022ರ ಆಗಸ್ಟ್ ತಿಂಗಳವರೆಗೆ ಉದ್ಯಮಿ ಅನಿಲ್ ಅಗಲ್‌ವಾಲ್ ಅವರ ಸಂಸ್ಥೆಯ ಕಡೆಯಿಂದಸುಮಾರು 230 ಕೋಟಿ ರು. ಮತ್ತು ಅರೊಬಿಂದೋ ಫಾರ್ಮಸಿ ಸಂಸ್ಥೆಯಿಂದ 49 ಕೋಟಿ ರು.ನಷ್ಟು ಚುನಾವಣಾ ಬಾಂಡ್ ಗಳ ಮೂಲಕ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.