Saturday, November 23, 2024
ಸುದ್ದಿ

ಶ್ರೀಕೃಷ್ಣನ ಮುಕುಟದಲ್ಲಿರುವ ನವಿಲು ಗರಿಯು ಎಲ್ಲಾ ಧರ್ಮಿಯರಿಗೂ ಪರಮಪೂಜ್ಯವೇಕೆ ಗೊತ್ತೇ? ಪುರಾಣಗಳೇ ಹೇಳಿವೆ ನವಿಲು ಗರಿಯ ರಹಸ್ಯ – ಕಹಳೆ ನ್ಯೂಸ್

ನವಿಲು ಗರಿ ಕೇವಲ ಅಂದದ ಪ್ರತೀಕವಲ್ಲ. ಬದಲಾಗಿ, ಯದುವಂಶದ ಅರಸನಾದ ಶ್ರೀಕೃಷ್ಣನ ಶಿರದಲ್ಲಿ, ಮುಕುಟದಲ್ಲಿರುವ ನವಿಲು ಗರಿ ಧಾರ್ಮಿಕ ಪ್ರಾಧಾನ್ಯತೆ ಮತ್ತು ಕೆಲವು ಸಮಸ್ಯೆಗಳ ನಿವಾರಣೆಗೂ ಇದು ಅತ್ಯಗತ್ಯ ಎಂಬ ನಂಬಿಕೆ ಇದೆ.  ಭಾರತ ದೇಶದ ರಾಷ್ಟ್ರ ಪಕ್ಷಿಯಾಗಿರುವ ನವಿಲು ಸ್ವಯಂ ತನ್ನಲ್ಲಿರುವ ಅತೀಂದ್ರಿಯ ಶಕ್ತಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಅಪಾರ ಶಕ್ತಿಯನ್ನು ಹೊಂದಿದ್ದು, ಎಲ್ಲಾ ಧರ್ಮದವರಿಗೂ ಪರಮಪೂಜ್ಯವಾಗಿದೆ!! ಅಷ್ಟಕ್ಕೂ ನವಿಲು ಗರಿಯ ಇಂದಿರುವ ರಹಸ್ಯವೇನು ಗೊತ್ತೇ? ಗೊತ್ತಾದರೆ ಅಚ್ಚರಿಪಟ್ಟುಕೊಳ್ಳುವುದಂತೂ ಗ್ಯಾರೆಂಟಿ!!

ಜೀವನದಲ್ಲಿ ಬಹಳ ಪ್ರಾಮುಖ್ಯತೆ ಕಲ್ಪಿಸಲಾಗುವ ನವಿಲುಗರಿ ಶ್ರೀಕೃಷ್ಣನಿಗೆ ಮಾತ್ರವಲ್ಲದೇ ಬಹಳಷ್ಟು ಜನರಿಗೂ ಇಷ್ಟ. ಹಲವಾರು ನಂಬಿಕೆಗಳ ಪ್ರಕಾರ ನವಿಲುಗರಿ ಜನರಿಗೆ ಬಹಳ ಪ್ರಯೋಜನವನ್ನು ಕೊಡುತ್ತದೆಯಲ್ಲದೇ ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳಿಗೆ ಇದರಲ್ಲಿ ಪರಿಹಾರವಿದೆ ಎಂಬ ನಂಬಿಕೆ ಹಿಂದೂ ಧರ್ಮಿಯರದ್ದು. ಈಡೀ ವಿಶ್ವದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ನಿಜವಾಗಿಯು ನಮ್ಮ ಭಾರತ ದೇಶದಲ್ಲಿ ನವಿಲಿನ ರೆಕ್ಕೆಗಳನ್ನು ತುಂಬ ಭಕ್ತಿಯಿಂದ ಪೂಜಿಸಲಾಗುತ್ತದೆಯಲ್ಲದೇ ದೇವನಾದ ಇಂದ್ರದೇವ ನವಿಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾನೆ ಎನ್ನುವುದನ್ನು ಪುರಾಣಗಳು ಹೇಳುತ್ತವೆ.
ಪುರಾಣಗಳಲ್ಲಿ ನವಿಲಿನ ಗರಿಗಳು ಇಲ್ಲದೇ ಹೋದರೆ ಪರಿಪೂರ್ಣತೆ ಇಲ್ಲದಂತಾಗುತ್ತದೆ ಎಂದು ಶ್ರೀಕೃಷ್ಣನು ಸಮರ್ಥಿಸಿಕೊಳ್ಳುತ್ತಾನೆ!! ಇಡೀ ಏಷ್ಯಾ ಖಂಡದಲ್ಲಿಯೇ ನವಿಲಿನ ರೆಕ್ಕೆಗಳನ್ನು ಅತ್ಯಂತ ಮಂಗಳಕರ ಎಂದು ಭಾವಿಸಿದ್ದಾರಲ್ಲದೇ 20ನೇ ಶತಮಾನದಲ್ಲಿಯೇ ಏಷ್ಯಾದ ಪಶ್ಚಿಮ ಭಾಗದಲ್ಲಿ ನವಿಲನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ!! ಇನ್ನು ಗ್ರೀಕ್ ಪುರಾಣದಲ್ಲಿ ನವಿಲನ್ನು ಜಾಗರೂಕ ರಕ್ಷಕನಾಗಿ ನೂರು ಕಣ್ಣುಗಳಿಂದ ಸೃಷ್ಟಿ ಮಾಡಲಾಗಿರುವುದರಿಂದ ನವಿಲಿನ ರೆಕ್ಕೆಗಳನ್ನು ಸ್ವರ್ಗದ ಮೇಲಿನ ಛಾವಣಿ ಮತ್ತು ನಕ್ಷತ್ರಗಳ ಕಣ್ಣು ಎಂದು ವಿವರಿಸಿದ್ದಾರೆ.
ಇನ್ನು ಹಿಂದೂ ಪುರಾಣಗಳ ಪ್ರಕಾರ, ನವಿಲು ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗಿದ್ದು, ದೇವಿ ಲಕ್ಷ್ಮೀಯು ಅದೃಷ್ಟ, ತಾಳ್ಮೆ, ದಯೆ, ಸಹಾನುಭೂತಿ ಉಳ್ಳವಳಾದುದರಿಂದ ನವಿಲು ಗರಿ ಈ ಎಲ್ಲಾ ಗುಣಗಳನ್ನು ಹೊಂದಿದೆ ಎಂದು ಹೇಳಲಾಗಿದೆ!! ಇನ್ನು ಏಷ್ಯಾ ಖಂಡದಲ್ಲಿ ಆಧ್ಯಾತ್ಮಿಕವಾಗಿ ಕ್ವಾನ್ ಯಿನ್ ನ ಸಂಕೇತವಾಗಿದೆ!!! ಕ್ವಾನ್ ಯಿನ್ ಆಧ್ಯಾತ್ಮಿಕ ಗುಣಗಳಾದ ದಯೆ, ಸಹಾನುಭೂತಿ, ಎಚ್ಚರ, ಪ್ರೀತಿ ಮತ್ತು ಒಳ್ಳೆಯತನದ ಪ್ರತಿಬಿಂಬವಾಗಿದೆ!! ನವಿಲು ತನ್ನ ಮೈಯಿಂದ ಬಾಲದ ತನಕ ಇರುವ ಎಲ್ಲಾ ರೆಕ್ಕೆಗಳನ್ನು ಸಹ ಮುಕ್ತವಾಗಿ ಅರಳಿಸುವ ಕಾರಣದಿಂದಾಗಿ ಬೌದ್ಧ ಧರ್ಮವು ನವಿಲಿನ ಗರಿಗಳನ್ನು ಮುಕ್ತವಾದ ಸಂಕೇತಕ್ಕೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ.
ಇನ್ನು ಕ್ರೈಸ್ತ ಧರ್ಮದಲ್ಲಿ ನವಿಲು ಪುನರುತ್ತಾನ, ಅಮರತ್ವವನ್ನು ಪ್ರತಿಬಿಂಬಿಸುವ ಸಂಕೇತವಾಗಿರುವ ಜೊತೆಗೆ ಆಧ್ಯಾತ್ಮಿಕ ಭೋದನೆಗಳಿಗೂ ಸಹ ನವಿಲಿನ ಗರಿಗಳನ್ನು ಕ್ರಿಶ್ಚಿಯನ್ನರು ನವೀಕರಿಸಿದ್ದಾರೆ!! ಮುಸ್ಲಿಂ ಧರ್ಮದಲ್ಲಿರುವ ದಂತಕಥೆಗಳ ಪ್ರಕಾರ, ಈ ಪಕ್ಷಿಯು ತನ್ನ ಸೌಂದರ್ಯದಿಂದಲೇ ಎಲ್ಲರನ್ನು ಬೆರಗುಗೊಳಿಸುವಂತೆ ಮಾಡುತ್ತದೆ ಎಂದು ನಂಬಲಾಗಿದ್ದು, ದೇವತೆಗಳಲ್ಲಿ ನವಿಲಿನ ರೆಕ್ಕೆಗಳನ್ನು ರಾಜ ಮನೆತನದ ಪ್ರತೀಕ ಮತ್ತು ಸ್ವರ್ಗದ ಬಾಗಿಲು ಎಂದು ಪರಿಗಣಿಸಿದ ಚಿಹ್ನೆಯಾಗಿ ಬಳಸುತ್ತಾರೆ!!
ಅದೆಷ್ಟೋ ಮಹಾನೀಯರು ನವಿಲು ಗರಿಯನ್ನು ಲೇಖನಿಯಾಗಿ ಬಳಸಿಕೊಂಡು ಮಹಾಗ್ರಂಥಗಳನ್ನು ಬರೆದಿರುವ ವಿಚಾರ ತಿಳಿದೇ ಇದೆ!! ಹಾಗಾಗಿ ಪ್ರಾಚೀನ ಕಾಲದಿಂದಲೂ ನವಿಲು ಗರಿಯನ್ನು ಅನೇಕ ಕಾರ್ಯಗಳಿಗೆ ಬಳಸಲಾಗುತ್ತಿರುವ ಜೊತೆಗೆ ನಮ್ಮ ಕಷ್ಟಗಳನ್ನು ದೂರ ಮಾಡುವ ಶಕ್ತಿ ಇದೆ ಎಂದೂ ನಂಬಲಾಗಿದೆ!! ಇಂತಹ ಅಭೂತಪೂರ್ವ ಶಕ್ತಿಯನ್ನು ಹೊಂದಿರುವ ನವಿಲು ಗರಿಯನ್ನು ಮನೆಯಲ್ಲಿಡುವುದರಿಂದ ನಕಾರಾತ್ಮಕ ಶಕ್ತಿಯು ಮನೆಯನ್ನು ಪ್ರವೇಶ ಮಾಡುವುದಿಲ್ಲ. ಇದರ ಜೊತೆಗೆ ದುಷ್ಟ ಶಕ್ತಿ ಹಾಗೂ ಪ್ರತಿಕೂಲವನ್ನುಂಟು ಮಾಡುವ ಶಕ್ತಿಗಳಿಂದ ನಮ್ಮನ್ನು ರಕ್ಷಿಸುವ ಶಕ್ತಿ ನವಿಲುಗರಿಗಿದೆ ಎಂದೂ ಹೇಳಲಾಗಿದೆ!!
– ಸರಿತಾ ಪ್ರವೀಣ್ ಪೂಜಾರಿ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು