ಭಾರತೀಯ ಸಾಂಪ್ರದಾಯಿಕ ಯುದ್ಧ ಕಲೆ ಥಾಂಗ್ – ತಾ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಗ್ರಾಮೀಣ ಪ್ರತಿಭೆ- ಕಹಳೆ ನ್ಯೂಸ್
ಬಂಟ್ವಾಳ: ಮಧ್ಯಪ್ರದೇಶದ ಥಾಂಗ್-ತಾ ಅಸೋಸಿಯೆಷನ್ ವತಿಯಿಂದ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ತಾಂಗ್- ತಾ (ಮಣಿಪುರ ಕಳರಿ ಫೈಟ್) ಚಾಂಪಿಯನ್ ಶಿಪ್ ನಲ್ಲಿ ಸುಂಕದಕಟ್ಟೆ ನಿರಂಜನಾನಂದ ಸ್ವಾಮಿ ಪಾಲಿಟೆಕ್ನಿಕ್ ನ ಮೆಕ್ಯಾನಿಕಲ್ ವಿಭಾಗದ ಪ್ರಥಮ ವರ್ಷದ ಡಿಪ್ಲೋಮ ವಿದ್ಯಾರ್ಥಿ ಸತೀಶ್ ಎಸ್. ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಅ.5 ರಿಂದ ಅ.7 ರವರೆಗೆ ತಾಂಗ್- ತಾ ಫೆಡರೇಷನ್ ಆಫ್ ಇಂಡಿಯದ ಸಹಕಾರದೊಂದಿಗೆ ನಡೆದ ಈ ಕ್ರೀಡಾಕೂಟದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿ ಈ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
ಕಳೆದ ಸೆ.21 ಮತ್ತು 22 ರಂದು ವಿಜಯಪುರದಲ್ಲಿ ನಡೆದ 5ನೇ ರಾಜ್ಯಮಟ್ಟದ ಥಾಂಗ್ ತಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.
ಪೊಳಲಿ ಶ್ರೀರಾಮಕೃಷ್ಣ ತಪೋವನದಲ್ಲಿ ಪೊಳಲಿ ಸರಕಾರಿ ಪ್ರೌಡಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಯಂತ್ ಆಚಾರ್ಯ ಹಾಗೂ ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮಕೂಟ್ಲು ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಸತೀಶ್ ಅವರ ಸಾಧನೆಗೆ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾಚೈತನ್ಯನಂದ ಸ್ವಾಮೀಜಿ ಅಭಿನಂದನೆ ಸಲ್ಲಿಸಿದ್ದಾರೆ.