ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ ಪೂಲ್ ಕ್ಯಾಂಪಸ್ ನೇಮಕಾತಿ ಅಭಿಯಾನ -ಕಹಳೆ ನ್ಯೂಸ್
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಅಭಿಯಾನವು ಯಶಸ್ವಿಯಾಗಿ ಸಂಪನ್ನಗೊಂಡಿತು. ಎರಡು ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ ಸುಮಾರು 30 ವರ್ಷಗಳಿಂದ ಕಂಪ್ಯೂಟೇಶನಲ್ ಪರಿಣತಿಯನ್ನು ಹೊಂದಿರುವ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಕ್ಷೇತ್ರದ ದಿಗ್ಗಜ ಸಂಸ್ಥೆ ಕೆಡೆನ್ಸ್ ಸಿಸ್ಟಮ್ಸ್ ಕಾಲೇಜಿಗೆ ಭೇಟಿ ನೀಡಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 12 ಇಂಜಿನಿಯರಿಂಗ್ ಕಾಲೇಜುಗಳ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ 623 ಅರ್ಹ ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ವಾರ್ಷಿಕ 15 ಲಕ್ಷ ರೂಪಾಯಿಗಳ ಸಂಬಳವನ್ನು ನೀಡುವ ಒಪ್ಪಂದದೊಂದಿಗೆ ನೇಮಕಾತಿ ಪ್ರಕ್ರಿಯೆಯು ನಡೆಯಿತು. ಪ್ರಥಮ ಸುತ್ತಿನ ಪರೀಕ್ಷೆಯ ನಂತರ 102 ವಿದ್ಯಾರ್ಥಿಗಳನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ದ್ವಿತೀಯ ತಾಂತ್ರಿಕ ಸುತ್ತಿನ ಬಳಿಕ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ 5 ವಿದ್ಯಾರ್ಥಿಗಳ ಸಹಿತ 20 ವಿದ್ಯಾರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.
ನಂತರ ಪ್ರತಿ ವಿದ್ಯಾರ್ಥಿಗಳ ಜತೆಗೆ ಮುಖಾ ಮುಖಿ ಸಂದರ್ಶನವನ್ನು ನಡೆಸಲಾಯಿತು. ಅಂತಿಮ ಫಲಿತಾಂಶ ಒಂದು ವಾರದ ಬಳಿಕ ಲಭ್ಯವಾಗಲಿದೆ.
ಕ್ಯಾಂಪಸ್ ನೇಮಕಾತಿಯು ಕನಿಷ್ಟ ಮಟ್ಟಕ್ಕೆ ತಲಪಿದ ಈ ಸಂದರ್ಭದಲ್ಲಿಯೂ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಕಂಪೆನಿಗಳೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಕಂಪೆನಿಗಳಲ್ಲಿ ನೇಮಕಾತಿಯನ್ನು ಒದಗಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.