ಸುಳ್ಯ: ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಎನಿಸಿರುವ ಡಯಾಲಿಸಿಸ್ ಸೇವೆ ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವಾಗುತ್ತಿದ್ದು, ಪ್ರಸ್ತುತ ಸುಳ್ಯ ತಾ| ಆಸ್ಪತ್ರೆಗೆ ಹೆಚ್ಚುವರಿ ಡಯಾಲಿ ಸಿಸ್ ಯಂತ್ರ ಒದಗಿಸಲಾಗಿದೆ. ವಾರಕ್ಕೆ ಸರಾಸರಿ 80 ಮಂದಿ (ಪೇಶೆಂಟ್)ಗೆ ಸೇವೆ ನೀಡಬಹುದಾದ ಸಾಮರ್ಥ್ಯ ಹೊಂದಿದೆ.
ತಾಲೂಕು ಆಸ್ಪತ್ರೆಯಲ್ಲಿ 2018ರಲ್ಲಿ ಡಯಾಲಿಸಿಸ್ ಘಟಕ ಆರಂಭಗೊಂಡಿದೆ. ಆರಂಭದಲ್ಲಿ ಎರಡು ಡಯಾಲಿಸಿಸ್ ಮಿಷನ್‌ನಲ್ಲಿ ರೋಗಿಗಳಿಗೆ ಡಯಾಲಿಸಿಸ್ ಸೇವೆ ನೀಡಲಾಗುತ್ತಿತ್ತು. ಬಳಿಕದಲ್ಲಿ ಯಂತ್ರಕ್ಕೆ ಬೇಡಿಕೆ ಹೆಚ್ಚಾಗತೊಡಗಿತು. ಸರಕಾರದಿಂದ ವ್ಯವಸ್ಥೆ ಸಿಗದ ಸಂದರ್ಭ ದಲ್ಲಿ ಅಂದಿನ ಶಾಸಕ ಎಸ್.ಅಂಗಾರ ಅವರ ಮನವಿಯ ಮೇರೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ 4 ಡಯಾಲಿಸಿಸ್ ಯಂತ್ರಗಳನ್ನು ಹಾಗೂ ಪ್ರಣವ ಫೌಂಡೇಶನ್ ಬೆಂಗಳೂರು ಸಂಸ್ಥೆ 1 ಡಯಾಲಿಸಿಸ್ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದರು. ಹೀಗೆ ಒಟ್ಟು 7 ಯಂತ್ರಗಳಲ್ಲಿ ಸೇವೆ ನೀಡಲಾಗುತ್ತಿತ್ತು. ಮಿಷನ್ ಕೈಕೊಟ್ಟ ಸಂದರ್ಭದಲ್ಲಿ ರೋಗಿಗಳು ಸಮಸ್ಯೆ ಅನುಭವಿಸುವ ಸ್ಥಿತಿ ಎದುರಾಗಿತ್ತು. ಖಾಸಗಿ ಆಸ್ಪತ್ರೆಗೆ ತೆರಳಿ ಡಯಾಲಿಸಿಸ್ ಮಾಡಬೇಕಾದ ಅನಿವಾರ್ಯತೆಯೂ ಬಂದಿತ್ತು.
ಏಜೆನ್ಸಿ ಬದಲು; ಹೊಸ ಯಂತ್ರ
ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಡಯಾಲಿಸಿಸ್ ಘಟಕಗಳು ಕಾರ್ಯಾಚರಿಸುತ್ತಿದೆ. ತಾಲೂಕು ಆಸ್ಪತ್ರೆ ಯಲ್ಲಿ ಇದುವರೆಗೆ ಇದ್ದ ಏಜೆನ್ಸಿಯ ಅವ ಮುಗಿದಿದ್ದುದರಿಂದ ಸರಕಾರ ಟೆಂಡರ್ ಆಹ್ವಾನಿಸಿತ್ತು. ನೇಫ್ಲೋಪ್ಲಸ್ ಎಂಬ ಸಂಸ್ಥೆ ಗುತ್ತಿಗೆ ಪಡೆದುಕೊಂಡಿತ್ತು. ಈ ಹಿಂದೆ ಇದ್ದ ಸಂಸ್ಥೆಯವರು ತಮ್ಮ ಮಿಷನ್‌ಗಳನ್ನು ಕೊಂಡುಹೋಗಿದ್ದು, ಪ್ರಸ್ತುತ ಬಂದಿರುವ ಹೊಸ ಸಂಸ್ಥೆಯವರು ಇಲ್ಲಿನ ಬೇಡಿಕೆಯನ್ನು ಮನಗಂಡು ಹೆಚ್ಚುವರಿಯಾಗಿ ಯಂತ್ರಗಳನ್ನು ಕಲ್ಪಿಸಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಒಟ್ಟು 10 ಡಯಾಲಿಸಿಸ್ ಯಂತ್ರಗಳ ಮೂಲಕ ರೋಗಿಗಳಿಗೆ ಸೇವೆ ನೀಡಲಾಗುತ್ತಿದೆ. ಪ್ರಸ್ತುತ 3 ಪಾಳಿಯಲ್ಲಿ ಸುಮಾರು 61 ಮಂದಿ ಡಯಾಲಿಸಿಸ್ ಸೇವೆ ಪಡೆದುಕೊಳ್ಳುತ್ತಿದ್ದಾರೆ..
80ರಷ್ಟು ರೋಗಿಗಳಿಗೆ ಸೇವೆ ಸಾಮರ್ಥ್ಯ
ಇದುವರೆಗೆ 7 ಡಯಾಲಿಸಿಸ್ ಯಂತ್ರಗಳು ಇದ್ದವು. ಇದೀಗ 3 ಹೆಚ್ಚುವರಿ ಯಂತ್ರಗಳು ಬಂದಿದ್ದು, 80ರಷ್ಟು ರೋಗಿಗಳಿಗೆ ಸೇವೆ ನೀಡುವ ಸಾಮರ್ಥ್ಯ ಇಲ್ಲಿದೆ.
-ಡಾ| ಕರುಣಾಕರ ಕೆ.ವಿ.,ಸುಳ್ಯ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ
ನಾಲ್ಕು ಪಾಳಿ ಸಾಮರ್ಥ್ಯ
ಈಗ ನಮ್ಮಲ್ಲಿ 61 ರೋಗಿಗಳಿಗೆ ಮೂರು ಪಾಳಿಯಲ್ಲಿ ಸೇವೆ ನೀಡಲಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾದಲ್ಲಿ ನಾಲ್ಕು ಪಾಳಿಯಲ್ಲಿ ಸೇವೆ ನೀಡುವ ಸಾಮರ್ಥ್ಯ ಇಲ್ಲಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬಹುದು.