ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಲಲಿತಾ ಪಂಚಮಿಯ ದಿನವಾದ ಸೋಮವಾರ ರಾತ್ರಿ ತಾಯಿಗೆ ಹರಕೆ ರೂಪದಲ್ಲಿ ಸಂದಾಯವಾದ ಸುಮಾರು 20 ಸಾವಿರ ಸೀರೆಗಳನ್ನು ಮಹಿಳಾ ಭಕ್ತರಿಗೆ ವಿತರಿಸಲಾಯಿತು.
ಕಳೆದ ಹಲವು ವರ್ಷಗಳಿಂದ ಲಲಿತಾ ಪಂಚಮಿಯ ದಿನ ಭಕ್ತರಿಗೆ ಸೀರೆಗಳನ್ನು ಹಂಚುತ್ತಿದ್ದು, ಕಳೆದ ವರ್ಷ ಸುಮಾರು 10 ಸಾವಿರದಷ್ಟು ಸೀರೆಗಳನ್ನು ವಿತರಿಸಲಾಗಿತ್ತು.
ಈ ಸಂದರ್ಭ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ ತಂತ್ರಿ, ಅನುವಂಶಿಕ ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಪವಿತ್ರಪಾಣಿ-ಅನುವಂಶಿಕ ಮೊಕ್ತೇಸರ ಪಿ. ಮಾಧವ ಭಟ್, ಅನುವಂಶಿಕ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಪ್ರಮುಖರಾದ ವೆಂಕಟೇಶ ನಾವಡ, ಸುಬ್ರಾಯ ಕಾರಂತ ಮೊದಲಾದವರಿದ್ದರು.
ನವರಾತ್ರಿಯ ಸಂದರ್ಭ ಪ್ರತಿನಿತ್ಯವೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ನಿತ್ಯ ಬೆಳಗ್ಗೆ ಭಕ್ತರ ಹರಕೆ ರೂಪದ ಚಂಡಿಕಾ ಹೋಮ, ರಾತ್ರಿ ನಿತ್ಯ ಪೂಜೆಯ ಬಳಿಕ ನವರಾತ್ರಿ ಪೂಜೆ ನಡೆಯುತ್ತಿದೆ.