ಮುಂಬೈ: ಭಾರತದ ಹೆಮ್ಮೆಯ ಉದ್ಯಮಿ ರತನ್ ಟಾಟಾ ನಿಧನ : ಪರೋಪಕಾರ ಕಲಿತಿದ್ದೇ ಟಾಟಾ ಕುಟುಂಬದಿಂದ; ಸುಧಾ ಮೂರ್ತಿ ಭಾವುಕ -ಕಹಳೆ ನ್ಯೂಸ್
ಅನಾರೋಗ್ಯದಿಂದ ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಕ್ಟೋಬರ್ 9ರಂದು ಕೊನೆಯುಸಿರೆಳೆದರು. ಅವರ ಅಗಲಿಕೆಗೆ ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕರ್ನಾಟಕದ ಉದ್ಯಮಿ, ಸಮಾಜ ಸೇವಕಿ, ಲೇಖಕಿ ಸುಧಾ ಮೂರ್ತಿ ಮಾತನಾಡಿ ಟಾಟಾ ಜತೆಗಿನ ಒಡನಾಟ ಮೆಲುಕು ಹಾಕಿದ್ದಾರೆ. ಪರೋಪಕಾರವನ್ನು ಟಾಟಾ ಕುಟುಂಬದಿಂದ ಕಲಿತಿರುವುದಾಗಿ ತಿಳಿಸಿದ್ದಾರೆ. ಟಾಟಾ ಅವರ ನಿಧನವನ್ನು ಯುಗವೊಂದರ ಅಂತ್ಯ ಎಂದು ಬಣ್ಣಿಸಿರುವ ಸುಧಾ ಮೂರ್ತಿ ವೈಯಕ್ತಿಕವಾಗಿಯೂ ತುಂಬಲಾರದ ನಷ್ಟ ಎಂದಿದ್ದಾರೆ.
“ಸರಳ ವ್ಯಕ್ತಿತ್ವ ಹೊಂದಿದ, ಯಾವಾಗಲೂ ಇತರರ ಬಗ್ಗೆ ಕಾಳಜಿ ಮತ್ತು ಸಹಾನುಭೂತಿ ಹೊಂದಿದ್ದ ರತನ್ ಟಾಟಾ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅವರಂತಹ ಉನ್ನತ ವ್ಯಕ್ತಿತ್ವ ಹೊಂದಿದ ಇತರ ವ್ಯಕ್ತಿಯನ್ನು ನಾನು ಭೇಟಿಯಾಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರು ದಂತಕಥೆಯಾಗಿದ್ದರು. ಇದು ಯುಗಾಂತ್ಯʼʼ ಎಂದು ಸುಧಾ ಮೂರ್ತು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ರತನ್ ಟಾಟಾ ಸಮಗ್ರತೆ ಹೊಂದಿದ ವ್ಯಕ್ತಿಯಾಗಿದ್ದರು ಎಂದು ಸುಧಾ ಮೂರ್ತಿ ಹೇಳಿದ್ದಾರೆ. ʼʼಅವರು ತಾಳ್ಮೆಯ ಸಾಕಾರಮೂರ್ತಿಯಾಗಿದ್ದರು. ಸರಳತೆಯನ್ನು ಜೀವನದುದ್ದಕ್ಕೂ ಪಾಲಿಸಿದ್ದರು. ಪರೋಪಕಾರಿ ಗುಣವನ್ನು ನಾನು ಟಾಟಾ ಕುಟುಂಬದಿಂದ ಕಲಿತಿದ್ದೇನೆ. ವೈಯಕ್ತಿಕವಾಗಿಯೂ ಇದು ನನಗೆ ತುಂಬಲಾರದ ನಷ್ಟʼʼ ಎಂದು ಹೇಳಿದ್ದಾರೆ.