ನಿನ್ನ ಪತ್ನಿಗೆ ಒಳ್ಳೆ ಬಟ್ಟೆ ತೊಡಲು ಹೇಳು ಇಲ್ಲ ಆಯಸಿಡ್ ಹಾಕುವೆ : ಪತ್ರಕರ್ತನ ಹೆಂಡತಿಗೆ ಬೆದರಿಕೆ – ಕಹಳೆ ನ್ಯೂಸ್
ಬೆಂಗಳೂರು, ಅಕ್ಟೋಬರ್ 11: ಆಯಸಿಡ್ (Acid) ಹಾಕುತ್ತೇನೆ ಅಂತ ಸಾಮಾಜಿಕ ಜಾಲತಾಣದ (Social Media) ಮೂಲಕ ಮಹಿಳೆಗೆ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಈ ಬಗ್ಗೆ ಮಹಿಳೆಯ ಪತಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದು, ಆರೋಪಿಯ ವಿರುದ್ಧ ಕ್ರಮಕೈಗೊಳ್ಳಿ ಎಂದು ಕರ್ನಾಟಕ ಡಿಜಿಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ನಿಕಿತ್ ಶೆಟ್ಟಿ ಜೀವ ಬೆದರಿಕೆ ಹಾಕಿದ ಆರೋಪಿ.
ಆರೋಪಿ ನಿಕಿತ್ ಶೆಟ್ಟಿ ಪತ್ರಕರ್ತ ಶಹಭಾಜ್ ಅನ್ಸರ್ ಅವರ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಹೌದು, ಪತ್ರಕರ್ತ ಶಹಭಾಜ್ ಅನ್ಸರ್ ಅವರ ಪತ್ನಿಗೆ ಆಯಸಿಡ್ ಹಾಕುತ್ತೇನೆ ಎಂದು ಆರೋಪಿ ನಿಕಿತ್ ಶೆಟ್ಟಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದಾನೆ.
ಇನ್ನು, ಆರೋಪಿ ನಿಕಿತ್ ಶೆಟ್ಟಿ ಬಟ್ಟೆ ತೊಡುವ ವಿಚಾರವಾಗಿ ಬೆದರಿಕೆ ಹಾಕಿದ್ದಾನೆ. ‘ ಕರ್ನಾಟಕದಲ್ಲಿ ಒಳ್ಳೆ ರೀತಿ ಉಡುಗೆ ತೊಟ್ಟುಕೊಳ್ಳುವಂತೆ ನಿನ್ನ ಪತ್ನಿಗೆ ಹೇಳು. ಇಲ್ಲದಿದ್ದರೆ ನಾನು ಆಕೆಯ ಮುಖಕ್ಕೆ ಆಯಸಿಡ್ ಹಾಕುತ್ತೇನೆ’ ಎಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಮೂಲಕ ಪತ್ರಕರ್ತ ಶಹಭಾಜ್ ಅನ್ಸರ್ ಅವರ ಪತ್ನಿಗೆ ಬೆದರಿಕೆ ಹಾಕಿದ್ದಾನೆ.
ಸಾಮಾಜಿಕ ಜಾಲತಾಣ ಬಳಕೆದಾರರು ನಿಕಿತ್ ಶೆಟ್ಟಿ ಕೆಲಸ ಮಾಡುವ ಕಂಪನಿಯನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದ ಮುಖಾಂತರ ಕಂಪನಿ ಮೇಲೆ ಒತ್ತಡ ಹೇರಿದ್ದಾರೆ.
ಟ್ವಿಟರ್ ಪೋಸ್ಟ್
ಈ ವಿಚಾರವಾಗಿ ನಿಕಿತ್ ಶೆಟ್ಟಿ ಕೆಲಸ ಮಾಡುತ್ತಿದ್ದ ಕಂಪನಿ ಪ್ರತಿಕ್ರಿಯಿಸಿದ್ದು, ‘ನಮ್ಮ ಉದ್ಯೋಗಿ ನಿಕಿತ್ ಶೆಟ್ಟಿ ಹಾಕಿರುವ ಪೋಸ್ಟ್ಅನ್ನು ನಾವೂ ವಿರೋಧಿಸುತ್ತೇವೆ. ಮತ್ತೊಬ್ಬರ ಉಡುಗೆ ಬಗ್ಗೆ ಮಾತನಾಡುವುದು ತಪ್ಪು. ಕಂಪನಿ ಯಾವಾಗಲೂ ಭದ್ರತೆ ಮತ್ತು ಶಾಂತಿಯುತ ವಾತಾವರಣ ಸೃಷ್ಟಿಸಲು ಇಷ್ಟಪಡುತ್ತದೆ. ಹೀಗಾಗಿ, ನಿಕಿತ್ ಶೇಟ್ಟಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದು, ಅವರನ್ನು ಐದು ವರ್ಷ ಕೆಲಸದಿಂದ ವಜಾ ಮಾಡಿದ್ದೇವೆ. ಅಲ್ಲದೇ ನಿಕಿತ್ ಶೇಟ್ಟಿ ವಿರುದ್ಧ ದೂರು ದಾಖಲಿಸಿದ್ದೇವೆ ಎಂದು ಹೇಳಿದೆ.
ಇದಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್ ಬಳಕೆದಾರರು ಕಂಪನಿಗೆ ಧನ್ಯವಾದ ಹೇಳಿದ್ದಾರೆ. ಮತ್ತು ಅನ್ಸಾರ್ ಅವರು ಕೂಡ ಕಂಪನಿಗೆ ಧನ್ಯವಾದ ಹೇಳಿದ್ದಾರೆ.