ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಕಾರು : ಮಹಿಳೆ ಮೃತ್ಯು – ಚಾಲಕನ ಸ್ಥಿತಿ ಗಂಭೀರ – ಕಹಳೆ ನ್ಯೂಸ್
ಬಂಟ್ವಾಳ: ಬಿಸಿರೋಡು- ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಆಳೆತ್ತರದಲ್ಲಿರುವ ಅಡಿಕೆ ತೋಟಕ್ಕೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ನಡೆದಿದ್ದು,ಚಾಲಕ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಕೊಡಿಯಾಲ್ ಬೈಲು ನಿವಾಸಿ ಭಾಗೀರಥಿ (58) ಮೃತಪಟ್ಟ ಮಹಿಳೆಯಾಗಿದ್ದಾರೆ. ಚಾಲಕ ರೂಪೇಶ್ (40) ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರೂಪೇಶ್ ಅವರ ಪತ್ನಿ ಸುಚಿತ್ರ (33) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪುಂಜಾಲಕಟ್ಟೆ ಕಡೆಯಿಂದ ಬರುತ್ತಿದ್ದ ಚಾವರ್ ಲೆಟ್ ಸ್ಪಾರ್ಕ್ ಕಾರು ಬೆಳಿಗ್ಗೆನ ಜಾವ ಸುಮಾರು 4.30 ಗಂಟೆಗೆ ಬಾಂಬಿಲ ಮಸೀದಿ ಮುಂಭಾಗದ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಮೂಲತಃ ಮಂಗಳೂರು ಕೊಡಿಯಾಲ್ ಬೈಲು ನಿವಾಸಿಯಾದ ಪಿಡಬ್ಲೂಡಿ ಇಂಜಿನಿಯರ್ ಗೋಪಾಲ ಸಹೋದರಿ ಭಾಗೀರಥಿ ಅವರು ಅವರು ಮೃತಪಟ್ಟಿದ್ದಾರೆ.
ಭಾಗೀರಥಿ ಅವರ ಮಗಳು ಸುಚಿತ್ರ ಅವರ ಪತಿ ರೂಪೇಶ್ ಅವರು ತುಮಕೂರು ಜಿಲ್ಲೆಯವರಾಗಿದ್ದು, ದಸರಾ ರಜೆಯಲ್ಲಿ ಅಳಿಯ ಮಗಳ ಜೊತೆ ತುಮಕೂರಿಗೆ ಹೋಗಿ ವಾಪಾಸು ಮಂಗಳೂರಿಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಬಾಂಬಿಲ ತಿರುವಿನಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ಣು, ಜೀವಹಾನಿಗಳು ನಡೆದಿವೆ. ಇತ್ತೀಚೆಗೆ ಇದೊಂದು ಅಪಘಾತ ಸ್ಪಾಟ್ ಆಗಿ ಪರಿವರ್ತನೆ ಆಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್. ಐ.ಸುತೇಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.