ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆ ತೆಂಕಿಲ ಕ್ಯಾಂಪಸ್ ನಲ್ಲಿ 4 ದಿನಗಳ ಕಾಲ ನಡೆಯಲಿದೆ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಟೂರ್ನಿ – 700ಕ್ಕೂ ಮಿಕ್ಕಿ ಕ್ರೀಡಾಳುಗಳು ಭಾಗಿ – ಅ. 16ಕ್ಕೆ ಜಾಥ; ಅ. 18,19ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ – ಕಹಳೆ ನ್ಯೂಸ್
ಪುತ್ತೂರು: ವಿದ್ಯಾಭಾರತಿ ಶಿಕ್ಷಣ ಸಂಸ್ಥಾನದೊಂದಿಗೆ ಸಂಯೋಜನೆಗೊಂಡಿರುವ ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಟೂರ್ನಿ ತೆಂಕಿಲ ವಿವೇಕಾನಂದ ಅಂಗ್ಲ ಮಾದ್ಯಮ ಶಾಲೆಯ ಕ್ಯಾಂಪಸ್ ನಲ್ಲಿ ಅ.16 ರಿಂದ ಅ.19 ರವರೆಗೆ ನಡೆಯಲಿದೆ.
ಈ ಕ್ರೀಡಾಕೂಟದಲ್ಲಿ ವಿವಿಧ ವಯೋಮಾನ ಅನುಗುಣವಾಗಿ ಬಾಲ, ಕಿಶೋರ, ತರುಣ ವಿಭಾಗದಡಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಸ್ಪರ್ಧಿಸಲಿದ್ದಾರೆ. ವಿವಿಧ ರಾಜ್ಯಗಳಿಂದ ರಾಷ್ಟ್ರ ಮಟ್ಟಕೆ ಆಯ್ಕೆಗೊಂಡಿರುವ ಸುಮಾರು 720 ಸ್ಪರ್ಧಾಳುಗಳು, 100 ಮಂದಿ ಅಧಿಕಾರಿ ವರ್ಗ ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು “ಪಂಚಮುಖಿ ಶಿಕ್ಷಣದ ಪ್ರಮುಖ ಆಶಯಗಳಾದ ಯೋಗ, ಸಂಗೀತ, ಸಂಸ್ಕೃತ, ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ, ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅದೀನದ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಪೈಕಿ ದೈಹಿಕ ಶಿಕ್ಷಣ ಮತ್ತು ಕ್ರೀಡೆಗೆ ವಿಶೇಷ ಪ್ರಾದ್ಯಾನ್ಯತೆಯನ್ನು ನೀಡಲಾಗುತ್ತಿದ್ದೂ ಅದರ ಭಾಗವಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಕ್ರೀಡಾಳುಗಳ ಜಾಥ :
ಪಂದ್ಯಾಟವನ್ನು ಪರಿಣಾಮಕಾರಿಯಾಗಿ ನಡೆಸುವ ಸಲುವಾಗಿ ಕ್ರೀಡಾಂಗಣಗಳನ್ನು ಅತ್ಯುತ್ತಮವಾಗಿ ನಿರ್ಮಿಸಲಾಗಿದೆ. 2 ಕ್ರೀಡಾಂಗಣಗಳಿಗೆ ಹೊನಲು ಬೆಳಕಿನ ವ್ಯವಸ್ಥೆಯನ್ನು ಜೋಡಿಸಲಾಗಿದೆ. ಉಧ್ಘಾಟನಾ ಸಮಾರಂಭದ ಪೂರ್ವಾಭಾವಿಯಾಗಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಕ್ರೀಡಾಪಟುಗಳನ್ನು ಸ್ವಾಗತಿಸುವ ಸಲುವಾಗಿ ಅ.16ರಂದು 3 ಗಂಟೆಗೆ ದರ್ಭೆ ವೃತ್ತದಿಂದ ಶಾಲಾ ಮೈದಾನದವರೆಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪಂದ್ಯಾಟದ ಉಧ್ಘಾಟನೆಯು ಅ 16 ಗುರುವಾರದಂದು ಸಾಯಂಕಾಲ 6 ಗಂಟೆಗೆ ಜರುಗಲಿರುವುದು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ರವರು ಪಂದ್ಯಾಕೂಟವನ್ನು ಉಧ್ಘಾಟಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಭಾರತಿ ಕರ್ನಾಟಕ ಇದರ ಅಧ್ಯಕ್ಷರಾದ ಪರಮೇಶ್ವರ ಹೆಗ್ಗಡೆ ವಹಿಸಲಿದ್ದಾರೆ.
ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ದೇಶದ ವಿವಿಧ ಭಾಗಗಳ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಪರಿಚಯಿಸುವ ಸಲುವಾಗಿ 17 ಮತ್ತು 18 ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.19ರಂದು ಮಧ್ಯಾಹ್ನ 3.30ರಿಂದ ಸಮಾರೋಪ ಕಾರ್ಯಕ್ರಮ ವಿವೇಕಾನಂದ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ವಿದ್ಯಾಭಾರತಿಯಡಿ 25ಸಾವಿರ ಶಾಲೆಗಳು, 35ಲಕ್ಷ ವಿದ್ಯಾರ್ಥಿಗಳು:
ಅಖಿಲ ಭಾರತೀಯ ಶೈಕ್ಷಣಿಕ ಸಂಘಟನೆಯಾದ ವಿದ್ಯಾಭಾರತಿ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಪುನರ್ ನಿರ್ಮಾಣದ ಚಿಂತನೆಯನ್ನು ಹೊಂದಿದೆ. ದೇಶಾದ್ಯಂತದ ಸುಮಾರು 25ಸಾವಿರ ಶಾಲೆಗಳಿದ್ದು, 35ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸುಮಾರು 26ಕ್ರೀಡೆಗಳನ್ನು ವಿದ್ಯಾಭಾರತಿ ಹಮ್ಮಿಕೊಂಡು ಬರುತ್ತಿದ್ದು, ಒಂದು ಕ್ರೀಡೆಯನ್ನು ನಡೆಸುವ ಅವಕಾಶ ವಿವೇಕಾನಂದಕ್ಕೆ ಲಭಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ ಎಂ ಕೃಷ್ಣ ಭಟ್ , ವಿದ್ಯಾಭಾರತೀಯ ದಕ್ಷಿಣ ಮದ್ಯ ಕ್ಷೇತ್ರಿಯ ನೈತಿಕ ಮತ್ತು ಆದ್ಯಾತ್ಮಿಕ ಶಿಕ್ಷಣ ಪ್ರಮುಖ ಮಂಕುಡೆ ವೆಂಕಟರಮಣ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ ಅಧ್ಯಕ್ಷರಾದ ಡಾ. ಶಿವಪ್ರಕಾಶ್, ವಿದ್ಯಾಭಾರತಿ ದಕ ಜಿಲ್ಲಾ ಮಟ್ಟದ ಖೇಲ್ ಕೂದ್ ಪ್ರಮುಖರಾದ ಕರುಣಾಕರ್ ಹಾಗೂ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆ ತೆಂಕಿಲದ ಪ್ರಾಂಶುಪಾಲ ಸತೀಶ್ ರೈ ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಬಗ್ಗೆ
1915ರಲ್ಲಿ ಅನೇಕ ಹಿರಿಯರ ಪರಿಶ್ರಮದಿಂದ ಪುತ್ತೂರು ಎಜುಕೇಶನ್ ಸೊಸೈಟಿ (ಈಗಿನ ವಿವೇಕಾನಂದ ವಿದ್ಯಾವರ್ಧಕ ಸಂಘ) ಅಸ್ಥಿತ್ವಕ್ಕೆ ಬಂತು. ಈ ಕೇಂದ್ರದ ಅಂಗವಾಗಿ 1916ರಲ್ಲಿ ಪುತ್ತೂರಿನಲ್ಲಿ ಶಾಲೆಯೊಂದನ್ನು ಆರಂಭಿಸಲಾಯಿತು. 1921 ರಲ್ಲಿ ಆ ಶಾಲೆಯನ್ನು ಡಿಸ್ಟ್ರೀಕ್ಟ್ ಬೋರ್ಡ್ ಗೆ ಹಸ್ತಾಂತರಿಸಲಾಯಿತಾದರೂ ಪ್ರತೀ ವರ್ಷ ವಿದ್ಯಾರ್ಥಿ ವೇತನ ನೀಡುವುದರೊಂದಿಗೆ ಪುತ್ತೂರು ಎಜುಕೇಶನ್ ಸೊಸೈಟಿ ಅಸ್ಥಿತ್ವದಲ್ಲಿ ಉಳಿಯಿತೆನ್ನುವುದು ಗಮನಾರ್ಹ ವಿಚಾರ.
ತದನಂತರ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಎಂದು ಮರುನಾಮಕರಣಗೊಂಡು, 1965 ರಲ್ಲಿ ವಿವೇಕಾನಂದ ಕಾಲೇಜು ವಿದ್ಯಾವರ್ಧಕ ಸಂಘದ ಒಂದು ಅಂಗ ಸಂಸ್ಥೆಯಾಗಿ ಸಮಾಜಮುಖಿ, ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಪ್ರಸ್ತುತ 80 ಸಂಸ್ಥೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಜೊತೆಗೆ ವಿವೇಕಾನಂದ ಮಹಾವಿದ್ಯಾಲವು ಸ್ವಾಯತ್ತ ಸಂಸ್ಥೆಯಾಗಿ ಮುಂದಡಿಯಿಟ್ಟಿರುವುದು ಗಮನಾರ್ಹ ವಿಚಾರ.
ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯವೇ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನೊಳಗೊಂಡ ಶುದ್ಧ, ಸರಳ ಮತ್ತು ಆಧುನಿಕ ಶಿಕ್ಷಣವನ್ನು ನೀಡುವುದು. ಮಾತ್ರವಲ್ಲದೆ ವಿದ್ಯಾರ್ಥಿ ಸಮೂಹದಲ್ಲಿ ನಿಸ್ವಾರ್ಥ, ಶ್ರದ್ಧಾಪೂರ್ಣ, ರಾಷ್ಟ್ರ್ರ ಸೇವೆಯ ಚೈತನ್ಯವನ್ನು ಪಂಚಮುಖಿ ಶಿಕ್ಷಣದ ಮೂಲಕ ಉದ್ದೀಪನಗೊಳಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಒಳ್ಳೆಯ ನಡತೆ, ಉತ್ತಮ ಹವ್ಯಾಸ-ಸದಾಭಿರುಚಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದಾಗಿದೆ.