ಬಂಟ್ವಾಳ ರೈಲ್ವೆ ನಿಲ್ದಾಣದ ಬಳಿ ಪಾಳು ಬಿದ್ದಿದ್ದ ರೈಲ್ವೆ ಶೆಡ್ ತೆರವಿಗೆ ಸೂಚನೆ – ಕಹಳೆ ನ್ಯೂಸ್
ಬಂಟ್ವಾಳ: ಬಂಟ್ವಾಳ ರೈಲ್ವೆ ನಿಲ್ದಾಣದ ಬಳಿ ದಶಕಗಳಿಂದ ಕಾರ್ಯಾಚರಿಸುತ್ತಿದ್ದು, ಬಳಿಕ ಪಾಳು ಬಿದ್ದಿದ್ದ ರೈಲ್ವೆ ಶೆಡ್ ಅನ್ನು ತೆರವುಗೊಳಿಸಬೇಕು ಎಂದು ರೈಲ್ವೆ ಇಲಾಖೆಯ ಇಂಜಿನಿಯರ್ ರಾಮಪ್ರಿಯ ಸೂಚಿಸಿದ್ದಾರೆ.
ಬಂಟ್ವಾಳ ರೈಲ್ವೆ ನಿಲ್ದಾಣದ ಆಸುಪಾಸಿನಲ್ಲಿ ಇಲಾಖಾ ತಪಾಸಣೆಗೆಂದು ಬಂದಿದ್ದ ಅವರನ್ನು ಸ್ಥಳೀಯರು ಭೇಟಿಯಾಗಿ ರೈಲ್ವೆ ಶೆಡ್ ನಿರುಪಯುಕ್ತವಾಗಿದ್ದು, ಇದರಿಂದ ಸಮಸ್ಯೆಗಳು ಉದ್ಭವಿಸಿವೆ. ಶೀಘ್ರ ತೆರವುಗೊಳಿಸುವಂತೆ ವಿನಂತಿಸಿದರು. ಇದಕ್ಕೆ ಉತ್ತರಿಸಿದ ಅವರು, ಪರಿಶೀಲನೆ ನಡೆಸಿ, ಮುಂದಿನ ದಿನಗಳಲ್ಲಿ ಇದನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸಮತಟ್ಟುಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಏನು ಸಮಸ್ಯೆ?
ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್ ಫಾರ್ಮ್ ಹಿಂಬದಿ ಇರುವ ರೈಲ್ವೆ ಜಾಗದಲ್ಲಿ ಮೀಟರ್ ಗೇಜ್ ರೈಲುಗಳು ಓಡುತ್ತಿದ್ದ ಕಾಲಕ್ಕೆ ಸಿಬಂದಿ ಉಳಿದುಕೊಳ್ಳುವ ಸಲುವಾಗಿ ಕಾರ್ಮಿಕರ ವಸತಿಗೃಹ ಮಾಡಲಾಗಿತ್ತು. ಕಬ್ಬಿಣದ ಕಂಬಗಳಿಂದ ಕೂಡಿದ ಶೆಡ್ ಇದಾಗಿದ್ದು, ಗಟ್ಟಿಮುಟ್ಟಾಗಿತ್ತು. ಕೆಲ ವರ್ಷಗಳ ಕಾಲ ಇಲ್ಲಿ ವಾಸ್ತವ್ಯವಿದ್ದ ಕಾರ್ಮಿಕರು ತೆರಳಿದ ನಂತರ ಖಾಲಿ ಉಳಿದಿತ್ತು. ಸುಮಾರು ಇಪ್ಪತ್ತೈದು ವರ್ಷಗಳಿಂದೀಚೆಗೆ ಈ ಶೆಡ್ ನಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಆದರೆ ಇಲ್ಲಿ ರಾತ್ರಿವೇಳೆ ಅಪರಿಚಿತರು ಬಂದು ತಂಗುವುದು, ದುಶ್ಚಟಗಳನ್ನು ಹೊಂದಿದವರು ಆಗಮಿಸುವುದು ನಡೆಯುತ್ತಿದ್ದು, ಸುತ್ತಮುತ್ತಲಿನವರಿಗೂ ಆತಂಕ ತಂದೊಡ್ಡಿತ್ತು. ಈ ಭಾಗದಲ್ಲಿ ದ್ವಿಚಕ್ರ ವಾಹನಗಳಲ್ಲಿ ಅವೇಳೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವವರ ಕುರಿತು ಸಾಕಷ್ಟು ಬಾರಿ ರೈಲ್ವೆ ಪೆÇಲೀಸರು ಹಾಗೂ ಸಂಬಂಧಪಟ್ಟವರಿಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಶೆಡ್ ತೆರವುಗೊಳಿಸಿದರೆ, ಕನಿಷ್ಠ ಈ ಭಾಗದಲ್ಲಾದರೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದು ಎಂದು ಯೋಚಿಸಿ ಸ್ಥಳೀಯರು ರೈಲ್ವೆ ಇಲಾಖಾ ಸೊತ್ತುಗಳ ಪರಿಶೀಲನೆಗೆಂದು ಬಂದ ಇಂಜಿನಿಯರ್ ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಶೆಡ್ ತೆರವುಗೊಳಿಸುವಂತೆ ಅವರು ಸೂಚಿಸಿದ್ದಾರೆ. ಈ ಸಂದರ್ಭ ರೈಲ್ವೆ ಹೋರಾಟಗಾರ ಸುದರ್ಶನ ಪುತ್ತೂರು ಜತೆಗಿದ್ದರು