ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ : ಪ್ರತಿಯೊಬ್ಬರೊಂದಿಗೂ ಬೆರೆಯುವುದೇ ನಾಯಕತ್ವ : ಡಾ.ಎಚ್.ಮಾಧವ ಭಟ್ – ಕಹಳೆ ನ್ಯೂಸ್
ಪುತ್ತೂರು: ನಾಯಕತ್ವ ಎಂದರೆ ಎಲ್ಲರಿಗಿಂತ ದೂರ ನಿಲ್ಲುವುದಲ್ಲ, ಪ್ರತಿಯೊಬ್ಬರೊಂದಿಗೂ ಬೆರೆಯುವುದು. ತನ್ನನ್ನು ಅನುಸರಿಸುವ ಅಪಾರ ಬೆಂಬಲಿಗರನ್ನು ತಾನೇ ಸ್ವತಃ ಅನುಸರಿಸುವ ಮನಸ್ಥಿತಿ ಉಳ್ಳವನು ಉತ್ತಮ ನಾಯಕನೆನಿಸಿಕೊಳ್ಳುತ್ತಾನೆ. ಬೆಂಬಲಿಗರ ಮಧ್ಯೆ ನಿಂತು ನಿಷ್ಕರ್ಷೆಗೆ ತನ್ನನ್ನು ತಾನು ಒಡ್ಡಿಕೊಂಡಾಗ ಪರಿಣಾಮಕಾರಿ ನಾಯಕತ್ವ ಸಿದ್ಧಿಸುವುದಕ್ಕೆ ಸಾಧ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ೨೦೨೪-೨೫ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಪರಸ್ಪರ ದೂರ ಸರಿಯುವ ಮನೋಭಾವದಿಂದ ಯಾವುದನ್ನೂ ಸಾಧಿಸಲಾಗುವುದಿಲ್ಲ. ಬದಲಾಗಿ ಪರಸ್ಪರ ಹೊಂದಾಣಿಕೆಯ ಭಾವದಿಂದ ಯಶಸ್ಸನ್ನು ನಮ್ಮದಾಗಿಸಬಹುದು. ಅನೇಕ ಘರ್ಷಣೆಗಳಿಗೆ ಎದುರು ಕುಳಿತು ಮಾತನಾಡದಿರುವುದೇ ಕಾರಣ. ಒಂದೊಮ್ಮೆ ನಾವು ಮುಖಾಮುಖಿಯಾಗಿ ನಮ್ಮ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಸಾಧ್ಯವಾದರೆ ಅನೇಕ ವೈಮನಸ್ಸುಗಳು ದೂರವಾಗುತ್ತದೆ. ಇಂತಹ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದೂ ನಾಯಕತ್ವದ ಒಂದು ಗುಣವೇ ಆಗಿದೆ ಎಂದರು.
ನಾಯಕತ್ವ ಎಂಬುದು ಜನರಲ್ಲಿನ ಸಾಮರ್ಥ್ಯವನ್ನು ಹೊರಗೆಡವುವ ಸಾಧನವಾಗಬೇಕು. ನಮ್ಮನ್ನು ಅನುಸರಿಸುವವರಲ್ಲಿ ಏನೇನು ಸಾಮರ್ಥ್ಯವಿದೆಯೋ ಅವುಗಳನ್ನು ಅನಾವರಣಗೊಳಿಸುವುದಕ್ಕೆ ಅವಕಾಶ ಮಾಡಿಕೊಟ್ಟಾಗ ವಿಸ್ಮಯಗಳು ಜರಗುವುದಕ್ಕೆ ಸಾಧ್ಯ. ಇಂದು ಭಾರತ ದೇಶ ಅನೇಕ ಧೀಮಂತ ನಾಯಕರನ್ನು ಆಯಕಟ್ಟಿನ ಜಾಗದಲ್ಲಿ ಹೊಂದಿರುವ ಕಾರಣದಿಂದ ಪ್ರಾಪಂಚಿಕವಾಗಿ ಗೌರವಕ್ಕೆ ಪಾತ್ರವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾAತ ಗೋರೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿ ನಾಯಕರು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಧ್ವಜ ಹಸ್ತಾಂತರಿಸಿದರು. ಈ ಸಂದರ್ಭಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್, ಕಾರ್ಯದರ್ಶಿ ಆಶ್ವಿತ್ ರೈ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶ್ರೀದೇವಿ ಹಾಗೂ ಅಪರ್ಣಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಶರಣ್ಯಾ ರೈ ಸ್ವಾಗತಿಸಿ, ವಿದ್ಯಾರ್ಥಿನಿ ಅಕ್ಷಿತಾ ಕಲ್ಲಡ್ಕ ವಂದಿಸಿದರು. ವಿದ್ಯಾರ್ಥಿನಿ ಪ್ರಿಯಾಲ್ ಆಳ್ವಾ ಕಾರ್ಯಕ್ರಮ ನಿರ್ವಹಿಸಿದರು.