ಸಂತ ಫಿಲೋಮಿನಾ ಪ .ಪೂ ಕಾಲೇಜು -ಮಾದಕ ದ್ರವ್ಯ ವಿರೋಧಿ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ – ಕಹಳೆ ನ್ಯೂಸ್
ಪುತ್ತೂರು : ಸಂತ ಫಿಲೋಮಿನಾ ಪ. ಪೂ ಕಾಲೇಜು ಮತ್ತು ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನ.21 ರಂದು ನಡೆಯಿತು.
ಪುತ್ತೂರು ಸಂಚಾರಿ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕುಟ್ಟಿ. ಎಂ ರವರು ಮಾತನಾಡಿ, ದುಬಾರಿ ವಾಹನ ಖರೀದಿಸಿದರೆ ಸಾಲದು. ರಸ್ತೆ ನಿಯಮಗಳ ಪ್ರಕಾರ ಸಾರ್ವಜನಿಕರಿಗೆ ತೊಂದರೆಯಾಗದಂತೆ ಓಡಾಟ ನಡೆಸಬೇಕು. ಮನೆಯ ನಿಯಮಗಳನ್ನು ಪಾಲಿಸುವಂತೆಯೇ, ರಸ್ತೆಯ ನಿಯಮಗಳನ್ನು ಗೌರವಿಸಬೇಕು. ವಾಹನ ಸವಾರರು ಇತರೆ ವಾಹನ ಸವಾರರು ಹಾಗೂ ಪಾದಚಾರಿಗಳನ್ನು ತಮ್ಮ ಕುಟುಂಬದವರಂತೆ ಪರಿಗಣಿಸಬೇಕು. ನಾವು ರಕ್ತದಾನ ಮಾಡಬೇಕು ಮತ್ತು ರಕ್ತವನ್ನು ರಸ್ತೆಯಲ್ಲಿ ಚೆಲ್ಲಬಾರದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ , ಇನ್ ಫಾರ್ಮೆಟ್ ಫೌಂಡೇಶನ್ ಮತ್ತು ಮುಡಿಪು ಅನುಗ್ರಹ ಟ್ರೈನಿಂಗ್ ಕಾಲೇಜಿನ ನಿರ್ದೇಶಕರಾಗಿರುವ ಅಬ್ದುಲ್ ಖಾದರ್ ನಾವೂರು ಮಾತನಾಡಿ ವ್ಯಸನ ಮುಕ್ತ ಸಮಾಜ ನಿರ್ಮಾಣ ವಿದ್ಯಾರ್ಥಿಗಳ ಧ್ಯೇಯವಾಗಲಿ. ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ದ್ರವ್ಯಗಳನ್ನು ವಿತರಿಸುವ ಜಾಲವನ್ನೂ ಮಟ್ಟಹಾಕಲು ಕಾನೂನಿನೊಂದಿಗೆ ಸಹಕರಿಸುವುದು, ಮಾದಕ ವಸ್ತುಗಳನ್ನು ಬಳಸುತ್ತಿರುವವರಿಗೆ ಅವುಗಳ ಮಾರಕ ಪರಿಣಾಮದ ಕುರಿತು ತಿಳುವಳಿಕೆ ನೀಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮುಂದಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿ ಅಮಲು ಸೇವನೆ ಒಂದು ರೀತಿಯ ಫ್ಯಾಷನ್ ಎಂಬುದಾಗಿ ತಿಳಿದ ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗಿ ನಿರಂತರ ಉಪಯೋಗಕ್ಕೆ ತೊಡಗುತ್ತಾರೆ. ತಿಳುವಳಿಕಾ ತರಗತಿ ಆಯೋಜನೆಯಿಂದ ಜಾಗೃತಿ ಮೂಡಿಸಲು ಸಾಧ್ಯ. ಜೀವನದ ಗುರಿ ಹಾಗೂ ಹಾದಿ ತಪ್ಪಿಸುವ ಮಾದಕ ವ್ಯಸನ ಹಾಗೂ ವ್ಯಸನಿಗಳಿಂದ ದೂರವಿದ್ದು, ಉತ್ತಮ ಹವ್ಯಾಸಗಳನ್ನು ಬೆಳೆಸಿ ಉತ್ತಮ ಭವಿಷ್ಯ ರೂಪಿಸುವಂತೆ ಕರೆ ನೀಡಿದರು.
ಅಲ್ ಇಕ್ವಾನ್ ಸಂಸ್ಥೆಯ ಟ್ರಸ್ಟಿ ಯಾಗಿರುವ ಮುಹಮ್ಮದ್ ಫಾಜಿಲ್ ಹಾಗೂ ಅಲ್ ಇಕ್ವಾನ್ ಸಂಸ್ಥೆಯ ಛೇರ್ಮನ್ ಮುಹಮ್ಮದ್ ಜಲಾಲ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ ನ ಎಲ್ಲಾ ಸದಸ್ಯರು ಹಾಗೂ ಕಾಲೇಜಿನ ಬೋಧಕ, ಬೋಧಕೇತರ ವರ್ಗ ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಅಲ್ ಇಖ್ವಾನ್ ಚಾರಿಟಿ ಫೌಂಡೇಶನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಫ್ರೀದ್ ಸ್ವಾಗತಿಸಿ, ವಿದ್ಯಾರ್ಥಿ ಸಾಯಿ ನಂದನ್ ವಂದಿಸಿ, ಉಪನ್ಯಾಸಕರಾದ ಶರತ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.