Friday, September 20, 2024
ಸುದ್ದಿ

ಎಲ್ಲರೂ ಜತೆಗೂಡಿ ಆಚರಿಸುವುದೇ ನಿಜವಾದ ಹಬ್ಬ: ಡಾ.ಪೀಟರ್ – ಕಹಳೆ ನ್ಯೂಸ್

ಪುತ್ತೂರು: ಎಲ್ಲರ ಜೊತೆಗೂಡಿ ಹಬ್ಬ ಅಚರಿಸುವುದು ನಮ್ಮ ದೇಶದ ಸಂಸ್ಕೃತಿ. ದೀಪಾವಳಿ ಕೇವಲ ಒಂದು ಮನೆಗೆ ಸೀಮಿತವಲ್ಲ, ಸಮಾಜದ ಪ್ರತಿಯೊಬ್ಬರೂ ಸೇರಿ ಸಂಭ್ರಮದಿಂದ ಆಚರಿಸಬೇಕು. ಕತ್ತಲಿನಿಂದ ಬೆಳಕಿನೆಡೆಗೆ ಸಾಗಿ ಮನಸ್ಸಿಗೆ ನೆಮ್ಮದಿಯನ್ನು ನೀಡುವುದರ ಮೂಲಕ ಅಂಧಕಾರವನ್ನು ಹೋಗಲಾಡಿಸುವ ಹಬ್ಬವೇ ದೀಪಾವಳಿ ಎಂದು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ ಪೀಟರ್ ವಿಲ್ಸನ್ ಪ್ರಭಾಕರ್ ತಿಳಿಸಿದರು.

ಅವರು ವಿವೇಕಾನಂದ ಸ್ನಾತ್ತಕೋತ್ತರ ಮತ್ತು ಸಂಶೋದನಾ ಕೇಂದ್ರದಲ್ಲಿ ಎಂ.ಕಾಂ ವಿಭಾಗದ ನೇತೃತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ದೀಪಾವಳಿ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪಾವಳಿ ದೀಪಗಳ ಹಬ್ಬ. ಪರಸ್ಪರ ಮಾನವ ಸಂಬಂಧ, ಪ್ರೀತಿ, ವಿಶ್ವಾಸವನ್ನು ಬೆಳೆಸಿ ಒಗ್ಗಟ್ಟಿನಿಂದ ಬಾಳುವುದೇ ಹಬ್ಬಗಳ ಪ್ರಮುಖ ಉದ್ದೇಶ. ಆದರೆ ಇಂದು ಆಚರಣೆ ಎನ್ನುವುದು ಒಂದು ಮನೆಗೆ ಸೀಮಿತವಾಗಿದೆ. ಹಬ್ಬ ಅಂದರೆ ಮಳಿಗೆಗಳಲ್ಲಿ ಬಟ್ಟೆಗಳನ್ನು ರಿಯಾಯಿತಿ ದರದಲ್ಲಿ ಪಡೆಯಲು ಇರಲು ಒಂದು ವಿಧಾನವಾಗಿ ಮಾರ್ಪಟ್ಟಿದೆ. ಹಾಗಾಗಿ ಇಂದು ಹಬ್ಬಗಳ ಮಹತ್ವದ ಬಗೆಗೆ ಜನರಲ್ಲಿ ಅರಿವು ಕ್ಷೀಣಿಸುತ್ತಿದೆ. ಇದು ಬದಲಾಗಬೇಕಿದೆ ಎಂದರು.

ಜಾಹೀರಾತು

ಹಿಂದೆ ಕಾಗದದ ಮೂಲಕ ಶುಭಾಶಯವನ್ನು ತಿಳಿಸುತ್ತಿದ್ದರು, ಆದರೆ ಇಂದು ಕೇವಲ ಒಂದು ಮೊಬೈಲ್ ಫೋನ್‌ನಿಂದ ಶುಭಾಶಯದ ಸಂದೇಶವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೇವೆ. ಯಾಂತ್ರಿಕ ವಿಚಾರಗಳಿಂದಾಗಿ ಜನರ ನಡುವಿನ ಮನೋಭಾವನೆಗಳು ಕುಂಠಿತವಾಗುತ್ತಿದೆ. ಹಬ್ಬಗಳ ಉದ್ದೇಶಗಳನ್ನು ಅರಿತು ಆಚರಿಸಿದಾಗ ಪ್ರತಿಯೊಂದು ಹಬ್ಬಕ್ಕೂ ಪರಿಪೂರ್ಣ ಅರ್ಥ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.

ಸ್ನಾತಕೋತ್ತರ ವಿಭಾಗಗಳ ಸಯೋಜಕಿ ಡಾ ವಿಜಯ ಸರಸ್ವತಿ ಮಾತನಾಡಿ ದೀಪಾವಳಿ ಜ್ಞಾನದ ಸಂಕೇತ. ಎಲ್ಲರೂ ಒಟ್ಟು ಸೇರಿ ಹಬ್ಬಗಳನ್ನು ಆಚರಿಸಿದಾಗ ಅದರಲ್ಲಿ ಸಿಗುವ ಖುಷಿಯ ಅನುಭವ ಹೆಚ್ಚು. ದೀಪಗಳ ಹಬ್ಬ ಮುಚ್ಚಿದ ಮನಸ್ಸನ್ನು ತೆರೆದು ಪ್ರೀತಿಯನ್ನು ತುಂಬುದರ ಮೂಲಕ ಜೀವನಕ್ಕೆ ಮಾದರಿಯಾಗುತ್ತದೆ. ವಿದ್ಯಾರ್ಥಿ ಜೀವನವೆಂಬುವುದು ಕೇವಲ ಪುಸ್ತಕಕ್ಕೆ ಸೀಮಿತವಾಗದೇ ಜೀವನ ಮೌಲ್ಯಗಳನ್ನು ಅರಿತುಕೊಳ್ಳುವಂತಾಗಬೇಕು. ಸಾಧನೆಗೆ ಪೂರಕವಾದ ವಿಷಯಗಳು ಬದುಕನ್ನು ಕಟ್ಟಿ ಕೊಡುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಎಂಕಾಂ ವಿಭಾಗದ ವಿದ್ಯಾರ್ಥಿಗಳಾದ ಶ್ವೇತಾ ಮತ್ತು ರವಿ ದೀಪಾವಳಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ವಿದ್ಯಾರ್ಥಿ ಅಶೋಕ್ ಭಾವಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ ಎಂಸಿಜೆ, ಎಂಕಾಂ, ಎಂಎಸ್ಸಿ ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಶ್ಮಿ ಪ್ರಾರ್ಥಿಸಿ, ಶ್ರೀಲಕ್ಷ್ಮಿ ಸ್ವಾಗತಿಸಿದರು, ಅನಿತಾ ವಂದಿಸಿ, ಅಕ್ಷತಾ ನಿರೂಪಿಸಿದರು.