ಅಂಬಿಕಾ ವಿದ್ಯಾಲಯ ಸಿಬಿಎಸ್‍ಇಯಲ್ಲಿ ವಾರ್ಷಿಕೋತ್ಸವ ಪ್ರತಿಭಾ ತರಂಗಿಣಿ 2024 : ಮಕ್ಕಳಿಗೆ ಸೋಲು ಸ್ವೀಕರಿಸುವುದನ್ನೂ ಕಲಿಸಿಕೊಡಬೇಕು : ರಾಜ ಬಿ.ಎಸ್- ಕಹಳೆ ನ್ಯೂಸ್
ಪುತ್ತೂರು: ನಾವಿಂದು ಮಕ್ಕಳಿಗೆ ಗೆಲ್ಲುವುದನ್ನಷ್ಟೇ ಹೇಳಿಕೊಡುತ್ತಿದ್ದೇವೆ. ಹಾಗಾಗಿ ಸೋಲನ್ನು ಒಪ್ಪಿಕೊಳ್ಳುವುದು, ಅದರಿಂದ ಸ್ಪೂರ್ತಿ ಪಡೆಯುವ ಕಲೆ ಮಕ್ಕಳಿಗೆ ಕರಗತವಾಗುತ್ತಿಲ್ಲ. ಆದ್ದರಿಂದ ಸೋಲುವುದನ್ನೂ ನಮ್ಮ ಮಕ್ಕಳಿಗೆ ಕಲಿಸಿಕೊಡಬೇಕಾದ ಅನಿವಾರ್ಯತೆ ಇದೆ ಎಂದು ಮಂಗಳೂರಿನ ಕರ್ನಾಟಕ ಬ್ಯಾಂಕ್‍ನ ಜನರಲ್ ಮ್ಯಾನೇಜರ್ ರಾಜ ಬಿ.ಎಸ್. ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ವಾರ್ಷಿಕೋತ್ಸವ – ಪ್ರತಿಭಾ ತರಂಗಿಣಿ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಶಿಕ್ಷಣವನ್ನು ಉದ್ಯೋಗಕೇಂದ್ರಿತವಾಗಿ ಕಾಣಲಾಗುತ್ತಿತ್ತು. ಉದ್ಯೋಗ ಪಡೆಯುವ ನಿರ್ದಿಷ್ಟ ಉದ್ದೇಶದೊಂದಿಗೆ ಶಿಕ್ಷಣವನ್ನು ಪಡೆದುಕೊಳ್ಳಲಾಗುತ್ತಿತ್ತು. ತದನಂತರದ ಕಾಲಘಟ್ಟದಲ್ಲಿ ಉದ್ಯೋಗಕೇಂದ್ರಿತವಾಗಿದ್ದ ಶಿಕ್ಷಣ ಉದ್ಯೋಗ ಪಡೆಯುವುದಷ್ಟೇ ಅಲ್ಲದೆ ವ್ಯಕ್ತಿಯೊಬ್ಬನ ದೀರ್ಘಕಾಲಿಕ ಔದ್ಯೋಗಿಕ ಬದುಕನ್ನು ನಿರ್ಣಯಿಸುವ ವ್ಯವಸ್ಥೆಯಾಗಿ ಬದಲಾಯಿತು. ಆದರೆ ಈಗ ಶಿಕ್ಷಣ ಎಂಬುದು ಜೀವನಕೇಂದ್ರಿತವಾಗಿದೆ. ನಮ್ಮ ಬದುಕು ನಿರ್ಣಯವಾಗುವುದೇ ಶಿಕ್ಷಣದಿಂದ ಎಂಬ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ.ದೀಪಕ್ ರೈ ಮಾತನಾಡಿ ನಾವು ನಮ್ಮ ಮಕ್ಕಳಿಗೆ ಇಂಜಿನಿಯರ್ ಆಗುವುದನ್ನು, ವೈದ್ಯರಾಗುವುದನ್ನು ಮತ್ತೇನೋ ಆಗುವುದನ್ನೆಲ್ಲಾ ಕಲಿಸಿಕೊಡುತ್ತಿದ್ದೇವೆ. ಆದರೆ ರಾಜಕಾರಣಿಯಾಗುವದನ್ನು ಕಲಿಸಿಕೊಡುತ್ತಿಲ್ಲ. ಒಂದು ದೇಶ ಉತ್ಕøಷ್ಟತೆಯನ್ನು ಸಾಧಿಸುವುದಕ್ಕೆ ಸುಶಿಕ್ಷಿತ ರಾಜಕಾರಣಿಗಳ ಅವಶ್ಯಕತೆ ಇದೆ. ಮುಂದಾಲೋಚನೆ ಇರುವ, ದೇಶಭಕ್ತಿ ಹೊಂದಿರುವ ರಾಜಕಾರಣಿಗಳನ್ನು ಸಮಾಜಕ್ಕೆ ಕೊಡುವುದಕ್ಕೆ ಸಾಧ್ಯವಾದರೆ ಅದು ಅತ್ಯುತ್ತಮ ರಾಷ್ಟ್ರನಿರ್ಮಾಣಕ್ಕೆ ಅಡಿಪಾಯವೆನಿಸುತ್ತದೆ ಎಂದರು.
ವಿದ್ಯಾಲಯದ ಹಿರಿಯ ವಿದ್ಯಾರ್ಥಿನಿ ಆತ್ಮಶ್ರೀ ಮಾತನಾಡಿ ವ್ಯಕ್ತಿಯನ್ನು ಶಕ್ತಿಯನ್ನಾಗಿಸುವುದೇ ಶಿಕ್ಷಣ. ಯಾವ ಶಿಕ್ಷಣ ವಿದ್ಯಾರ್ಥಿಯನ್ನು ರಾಷ್ಟ್ರಭಕ್ತನನ್ನಾಗಿ ರೂಪಿಸುವುದಿಲ್ಲವೋ ಅದು ಶಿಕ್ಷಣ ಎನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ವಾರ್ಷಿಕ ವರದಿ ಮಂಡಿಸಿದರು. ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋ ಮಾತನಾಡಿ ದೇಶವನ್ನು ಉನ್ನತಸ್ಥಾನಕ್ಕೆ ಒಯ್ಯುವ ಕನಸನ್ನು ವಿದ್ಯಾರ್ಥಿಗಳು ಕಾಣಬೇಕು. ಇಂದು ಜಗತ್ತನ್ನು ಆಳುತ್ತಿರುವ ಡಾಲರ್‍ನ ಜಾಗದಲ್ಲಿ ಭಾರತದ ರೂಪಾಯಿ ಹೋಗಿ ಕುಳಿತುಕೊಳ್ಳಬೇಕು. ಈಗ ಭಾರತೀಯರನ್ನು ವಿದೇಶೀಯರು ತಮ್ಮ ಕಂಪೆನಿಗಳಲ್ಲಿ ದುಡಿಸಿಕೊಳ್ಳುವಂತೆ ಮುಂದೊಂದು ದಿನ ಅಮೇರಿಕಾ, ಆಸ್ಟ್ರೇಲಿಯಾ, ಇಂಗೆಂಡ್‍ನಂತಹ ದೇಶಗಳ ಜನರನ್ನು ಭಾರತೀಯರು ತಮ್ಮ ಸಂಸ್ಥೆಗಳಲ್ಲಿ ದುಡಿಸುವಂತಾಗಬೇಕು. ಅಂತಹ ಕನಸಿನೊಂದಿಗೆ ನಮ್ಮ ಮಕ್ಕಳು ಬೆಳೆಯಬೇಕು ಎಂದು ಕರೆನೀಡಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಪುತ್ತೂರು ಕರ್ನಾಟಕ ಬ್ಯಾಂಕ್‍ನ ಮ್ಯಾನೇಜರ್ ಶ್ರೀಶ, ವಿದ್ಯಾಲಯದ ಉಪಪ್ರಾಚಾರ್ಯೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ರಾಜ ಬಿ.ಎಸ್ ಹಾಗೂ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಹಂತವಾದ ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ (ಎಸ್. ಜಿ. ಎಫ್. ಐ) ಗೆ ಆಯ್ಕೆಯಾದ ಆರನೇ ತರಗತಿಯ ವಿದ್ಯಾರ್ಥಿ ಪ್ರತ್ಯೂಷ್ ಎಸ್.ಎಲ್.ಗೌಡ, ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಮೆಹೆಕ್ ರವಿಕುಮಾರ್ ಕೊಠಾರಿ, ದೃಶಾನ ಸುರೇಶ್ ಸರಳಿಕಾನ ಹಾಗೂ ಹತ್ತನೆಯ ತರಗತಿಯ ವಿದ್ಯಾರ್ಥಿ ವರ್ಧಿನ್ ದೀಪಕರ್ ರೈ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗೈದವರನ್ನು ಹಾಗೂ ವಿದ್ಯಾಭಾರತಿ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿವಿಧ ಹಂತಗಳಲ್ಲಿ ಬಹುಮಾನ ಪಡೆದವರನ್ನು ಅಭಿನಂದಿಸಲಾಯಿತು. ಹತ್ತನೆ ತರಗತಿಯ ವಿದ್ಯಾಥಿನಿ ನಿಯತಿ ಭಟ್ ಅವರಿಗೆ ‘ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಸನ್ಮಯ್, ಯಶಸ್ ಬಿ., ಮಯೂರ್ ಎಸ್., ಧೃವ ಬಿ. ಹಾಗೂ ಸಾತ್ವಿಕ್ ಜಿ. ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕಿ ಅನಘಾ ವಿ.ಪಿ ಸ್ವಾಗತಿಸಿ, ವಿದ್ಯಾ ನಾಯಕ .ಆರ್.ಸೂರ್ಯ ವಂದಿಸಿದರು. ಶಿಕ್ಷಕಿಯರಾದ ಸುಷ್ಮಾ ಮಿಥುನ್ ಹಾಗೂ ರಮ್ಯ ಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು.