ವಿಶ್ವಜನನಿ ಗೋಮಾತೆಯ ವಿರಾಟ್ ಸ್ವರೂಪದ ದರ್ಶನಮಾಡಿಸುವ ‘ಮಹಾನಂದಿ ಗೋಲೋಕ’ ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿದ್ದು, ದೀಪಾವಳಿ ಪ್ರಯುಕ್ತ ವಿಶೇಷ ಸಾಮೂಹಿಕ ಗೋಪೂಜಾ ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 9.00 ರಿಂದ ಮಹಾನಂದಿ ಗೋಲೋಕದಲ್ಲಿ ಆಯೋಜಿಸಲಾಗಿದೆ.
ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ‘ಮಹಾನಂದಿ ಗೋಲೋಕ’ವು ಕಳೆದೆರಡು ದಶಕಗಳಿಂದ ಗೋಸಂರಕ್ಷಣೆ – ಗೋಸಂವರ್ಧನೆ – ಗೋಸಂಬೋಧನೆ ಹಾಗೂ ಗೋಸಂಶೋಧನೆಯ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದು, ನಾಡಿನ ವೈವಿಧ್ಯಮಯ ದೇಶೀ ಗೋತಳಿಗಳಿರುವ ವಿಶಿಷ್ಟ ಗೋಕೇಂದ್ರವಾಗಿ ರೂಪಿತವಾಗಿದೆ. ಗೋಶಾಲೆಯ ಪುಣ್ಯ ಪರಿಸರದ ಮಧ್ಯೆ ‘ಗೋವರ್ಧನಗಿರಿಧಾರಿ ಗೋಪಾಲಕೃಷ್ಣ’ ದೇವಾಲಯ ಇಲ್ಲಿದ್ದು, ಗೋಶಾಲೆಯ ದಿವ್ಯತೆಯನ್ನು ಹೆಚ್ಚಿಸಿದೆ.
34 ತಳಿಗಳಿರುವ ಪ್ರಪಂಚದ ಏಕೈಕ ಗೋಶಾಲೆ
ಭಾರತೀಯ ದೇಶೀ ಗೋತಳಿಗಳ ಪೈಕಿ ಲಭ್ಯವಿರುವ ಎಲ್ಲಾ 34 ತಳಿಗಳೂ ಈ ಮಹಾನಂದಿ ಗೋಲೋಕದಲ್ಲಿದ್ದು, ಎಲ್ಲಾ ಗೋತಳಿಗಳನ್ನು ಹೊಂದಿರುವ ಪ್ರಪಂಚದ ಏಕೈಕ ಗೋಶಾಲೆ ಎಂಬ ಹಿರಿಮೆಯನ್ನು ಇದು ಹೊಂದಿದೆ. ನೂರಾರು ಗೋವುಗಳು, ವೈವಿಧ್ಯಮಯ ತಳಿಗಳು ಆಕರ್ಷಣೀಯವಾಗಿದ್ದು, ಗೋಪ್ರೇಮಿಗಳ ಪಾಲಿಗೆ ವಿಶ್ವವಿದ್ಯಾಲಯವಾಗಿ, ಪ್ರಸಿದ್ಧ ಪ್ರವಾಸಿ ತಾಣವಾಗಿ ಕಣ್ಮನ ಸೆಳೆಯುತ್ತಿದೆ.
ದೀಪಾವಳಿಯ ಪ್ರಯುಕ್ತ ವಿಶೇಷ ಗೋಪೂಜೆಯನ್ನು ಆಯೋಜಿಸಲಾಗಿದ್ದು, ನಾಳೆ ಬೆಳಗ್ಗೆ 9.00 ರಿಂದ ನಡೆಯುವ ಸಾಮೂಹಿಕ ಗೋಪೂಜೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಮಾಹಿತಿಗಾಗಿ : 9449595208, 9845002455