ಪುತ್ತೂರು: ಖ್ಯಾತ ನ್ಯಾಯವಾದಿಯಾಗಿರುವ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಕೆ. ಶಂಭು ಶರ್ಮರವರು ಕಕ್ಷಿದಾರರೋರ್ವರ ಜಾಗದ ವೀಕ್ಷಣೆಗೆ ತೆರಳಿದ್ದ ವೇಳೆ ಅವರಿಗೆ ಹಲ್ಲೆ ನಡೆಸಿ ಬೆದರಿಕೆ ಒಡ್ಡಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಉರ್ವ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಮಂಗಳೂರು ವಕೀಲರ ಸಂಘದ ಹಿರಿಯ ವಕೀಲರಾಗಿರುವ ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದವರಾದ ಕೆ. ಶಂಭು ಶರ್ಮ ಅವರು ತಮ್ಮ ಕಕ್ಷಿದಾರರಾದ ಪುತ್ತೂರು ಮೂಲದ ಡಾ. ರಜನೀಶ್ ಸೊರಕೆ ಅವರಿಗೆ ಸೇರಿದ ಜಾಗದ ಪರಿಶೀಲನೆಗೆ ಹೋಗಿದ್ದ ವೇಳೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಉರ್ವ ಠಾಣಾ ಪೊಲೀಸರು ಚಂದ್ರಹಾಸ ಶ್ರೀಯಾನ್ ಎಂಬಾತನನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ಸಂಬಂಧಿಕರೂ ಆಗಿರುವ ಡಾ. ರಜನೀಶ್ ಸೊರಕೆ ಅವರಿಗೆ ಸೇರಿದ ಸ್ಥಳದ ವೀಕ್ಷಣೆ ನಡೆಸುತ್ತಿದ್ದ ವೇಳೆ ಚಂದ್ರಹಾಸ ಶ್ರೀಯಾನ್ ಎಂಬಾತ ಮೊದಲು ಡಾ. ರಜನೀಶ್ ಸೊರಕೆ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ. ಅಲ್ಲದೆ, ಸ್ಥಳದಲ್ಲಿದ್ದ ಮಹಿಳಾ ನ್ಯಾಯವಾದಿಯೋರ್ವರೊಂದಿಗೆ ಅನುಚಿತವಾಗಿ ವರ್ತಿಸಿ ಅವರಿಗೂ ಹಲ್ಲೆ ನಡೆಸಿದ್ದ. ತಡೆಯಲು ಮುಂದಾದ ವೇಳೆ ಹಿರಿಯ ವಕೀಲ ಕೆ. ಶಂಭು ಶರ್ಮರವರಿಗೂ ಹಲ್ಲೆ ನಡೆಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ್ದ. ಈ ವೇಳೆ ಡಾ. ರಜನೀಶ್ ಅವರು ಉರ್ವ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ ತನ್ನ ಮೊಬೈಲ್ ಫೋನ್‌ನಲ್ಲಿ ವಿಡೀಯೋ ಚಿತ್ರೀಕರಣ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕುಪಿತನಾದ ಚಂದ್ರಶೇಖರ ಶೀಯಾನ್ ಡಾ. ರಜನೀಶ್ ಅವರ ಕೈಯಿಂದ ಮೊಬೈಲ್ ಫೋನ್ ಕಸಿದುಕೊಂಡದ್ದಲ್ಲದೆ ಮುನ್ನುಗ್ಗಿ ಬಂದು ಶಂಭುಶರ್ಮ ಅವರನ್ನು ದೂಡಿ ಹಾಕಿದ್ದಾನೆ. ಇದರಿಂದಾಗಿ ಪಕ್ಕದಲ್ಲಿದ್ದ ಗೋಡೆ ತಾಗಿ ಶಂಭು ಶರ್ಮ ಅವರ ಭುಜಕ್ಕೆ ಗಾಯವಾಗಿದೆ. ಈ ಎಲ್ಲಾ ಬೆಳವಣಿಗೆ ನಡೆಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡು ಚಂದ್ರಹಾಸ್ ಶ್ರೀಯಾನ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಗ್ಯ ತಪಾಸಣೆ ವೇಳೆ ಬಂಧಿತ ಚಂದ್ರಹಾಸ್‌ಗೆ ರಕ್ತದೊತ್ತಡದಲ್ಲಿ ಏರುಪೇರು ಉಂಟಾಗಿದ್ದರಿಂದ ಆತನನ್ನು ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ತವ್ಯ ನಿರತ ವಕೀಲರ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ. ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್. ಅವರು ತಪ್ಪಿತಸ್ಥನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.