Recent Posts

Friday, November 15, 2024
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕನ್ನಡ ಕೇವಲ ಭಾಷೆಗಷ್ಟೇ ಸೀಮಿತವಲ್ಲ: ಪ್ರೊ. ಗಣಪತಿ ಗೌಡ-ಕಹಳೆ ನ್ಯೂಸ್

ಮಂಗಳೂರು: ಕನ್ನಡ ನಾಡು ನುಡಿಯಲ್ಲಿ ನಾವು ಬೆರೆತಿದ್ದೇವೆ. 3000 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಪೋಷಿಸಿ ಬೆಳೆಸಿಕೊಂಡು ಬಂದಿದ್ದೇವೆ. ಅಲ್ಲದೇ, ಜಗತ್ತಿಗೆ ಪಸರಿಸುವ ಕೆಲಸವನ್ನು ಕನ್ನಡ ಕವಿಗಳು ಮಾಡಿದ್ದಾರೆ. ಅವರಿಗೆ ಬೇರೆ ಭಾಷೆ ಅರಿವಿದ್ದರೂ ಕನ್ನಡಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಈ ಹೊತ್ತಿಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶ ಹಾಗೂ ಕನ್ನಡ ವಿಭಾಗದ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಂಥಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ‍್ಯ ಬಂದ ನಂತರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಮೂಲಕ ಕರ್ನಾಟಕದ ಅದೆಷ್ಟೋ ಪಾಲನ್ನು ನಾವು ಕಳೆದುಕೊಂಡಿದ್ದೇವೆ. ಆದರೂ ಕನ್ನಡ ನಾಡು ನುಡಿ ಕುರಿತು ಗೌರವವನ್ನು ಕಳೆದುಕೊಂಡಿಲ್ಲ. ಕನ್ನಡ ಕೇವಲ ಭಾಷೆಯಾಗಿ ಉಳಿದಿಲ್ಲ, ಅದೊಂದು ಅಸ್ಮಿತೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿಗಳಾದ ಯಶವಂತ, ತೇಜಸ್ವಿನಿ, ಸುಶಾಂತ ಹಾಗೂ ದ್ವಿತೀಯ ಎಂಎ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿ ಶಿವಪ್ರಸಾದ್ ಅವರುಗಳು ಕನ್ನಡ ಪುಸ್ತಕಗಳ ವಿಮರ್ಶೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಗ್ರಂಥಪಾಲಕಿ ಡಾ. ವನಜಾ, ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಡಾ. ಸಿದ್ದರಾಜು ಎಂ. ಎನ್., ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಲಕ್ಷ್ಮೀದೇವಿ ಎಲ್., ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಮಾಧವ ಎಂ. ಕೆ. ಸೇರಿದಂತೆ ಇತರೆ ವಿಭಾಗ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು