Recent Posts

Thursday, November 21, 2024
ಉಡುಪಿಸುದ್ದಿ

ಮಲ್ಪೆ ಕಡಲ ತೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ – ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ-ಕಹಳೆ ನ್ಯೂಸ್

ಉಡುಪಿ : ಮಲ್ಪೆ ಕಡಲ ತೀರಕ್ಕೆ ಪ್ರವಾಸಿಗರು ಆಗಮಿಸುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ. ಪ್ರವಾಸಿಗರ ಅನುಕೂಲಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಲು, ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಶುಕ್ರವಾರ ಸಂಜೆ ನಗರದ ಮಣಿಪಾಲನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಲ್ಪೆ, ಪಡುಕೆರೆ ಬೀಚ್ ಪ್ರದೇಶದ ಸ್ವಚ್ಚತಾ ನಿರ್ವಹಣೆ, ಫುಡ್‌ಕೋರ್ಟ್ , ಶೌಚಾಲಯ, ಪಾಕಿಂಗ್ ವ್ಯವಸ್ಥೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒಳಗೊಂಡಂತೆ ಬೀಚ್ ಪ್ರದೇಶದ ಮಾಸ್ಟರ್ ಪ್ಲಾನ್ ವರದಿಯನ್ನು ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಬಂದರು ಮತ್ತು ಮೀನುಗಾರಿಕೆ ಚಟುವಟಿಕೆ ಪ್ರದೇಶಗಳ ಸ್ಥಳ ಮೀಸಲಿರಿಸಿ, ಸಮಗ್ರವಾದ ವರದಿಯನ್ನು ಶೀಘ್ರವಾಗಿ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಲ್ಪೆ ಕಡಲ ತೀರದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಸುರಕ್ಷತೆಗೆ ಪ್ರಥಮ ಆದ್ಯತೆಯನ್ನು ನೀಡುವುದರೊಂದಿಗೆ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ವಾರದ ಕಡೆಯ ದಿನಗಳಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚು ಪ್ರವಾಸಿಗರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ. ಅವರುಗಳಿಗೆ ಸ್ಥಳೀಯ ಕಡಲ ತೀರದ ಮಾಹಿತಿ ಇರುವುದಿಲ್ಲ. ಅವರುಗಳಿಗೆ ಮಾಹಿತಿ ತಿಳಿಸಲು ಒತ್ತು ನೀಡಬೇಕು. ಇದರಿಂದ ಯಾವುದೇ ಅವಘಡಗಳು ಆಗದಂತೆ ತಪ್ಪಿಸಲು ಸಾಧ್ಯ ಎಂದರು.

ಬೀಚ್ ಪ್ರದೇಶಗಳಲ್ಲಿ ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆಗಾಗಿ ಅಗತ್ಯವಿರುವ ಜೀವ ರಕ್ಷಕ ಸಿಬ್ಬಂದಿಗಳನ್ನು ಆಯ್ಕೆ ಮಾಡಿ, ಅವರುಗಳಿಗೆ ಅಗತ್ಯವಿರುವ ತರಬೇತಿ ನೀಡಿ ಅವರನ್ನು ಹೊರಗುತ್ತಿಗೆ ಆದಾರದ ಮೇಲೆ ನೇಮಿಸಬೇಕು ಎಂದ ಅವರು, ಸೆಂಟ್ ಮೇರೀಸ್ ದ್ವೀಪಕ್ಕೆ ಅಗತ್ಯವಿರುವ ಜೀವ ರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದುರು .
ಬೀಚಿನಲ್ಲಿ ಪ್ರದೇಶಗಳಲ್ಲಿ ಹೈ ಮಾಸ್ಟ ಬೀದಿ ದೀಪಗಳನ್ನು ಅಳವಡಿಸಬೇಕು ಅವುಗಳ ನಿರ್ವಹಣೆಯನ್ನು ಆಗಿಂದಾಗೆ ಮಾಡುವುದರ ಜೊತೆಗೆ ಬೆಳಕಿನ ಅಭಾವ ಆಗದಂತೆ ಎಚ್ಚರ ವಹಿಸಬೇಕು ಎಂದರು .

ಮಲ್ಪೆ ಬೀಚ್ ಪ್ರದೇಶದಲ್ಲಿ ಜಲ ಸಾಹಸ ಚಟುವಟಿಕೆಗಳು ನಡೆಸುವಾಗ ಗುತ್ತಿಗೆದಾರರು ಬೋಟ್ ನ ಸಾಮರ್ಥ್ಯ ಮೀರಿ ಹೆಚ್ಚಿನ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ ಗುತ್ತಿಗೆದಾರರು ನಿಯಮ ಮೀರಿ ಹಾಗೂ ಸಾಮರ್ಥ್ಯ ಮೀರಿ ಪ್ರವಾಸಿಗರನ್ನು ಬೋಟ್ ನಲ್ಲಿ ಕರೆದುಕೊಂಡು ಬಂದಲ್ಲಿ ದಂಡ ವಿಧಿಸುವುದರ ಜೊತೆಗೆ ನೋಟಿಸ್ ನೀಡಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಯಶ್‌ ಪಾಲ್ ಎ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭೆಯ ಸದಸ್ಯರಾದ ಯೋಗೀಶ್ ಸಾಲಿಯಾನ್, ಲಕ್ಷ್ಮಿ ಮಂಜುನಾಥ್ ಹಾಗೂ ವಿಜಯ ಕೊಡವೂರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.