ಶಿಗ್ಗಾವಿ -ಸವಣೂರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹವಾ : ಗೃಹಲಕ್ಷ್ಮೀ ಯೋಜನೆಯ ರೂವಾರಿ ಮನೆಗೆ ಬಂದ ಸಂತಸ : ಹೋದಲೆಲ್ಲಾ ಸೆಲ್ಫಿಗೆ ಮುಗಿಬೀಳುವ ಅಭಿಮಾನಿಗಳು- ಕಹಳೆ ನ್ಯೂಸ್
ಶಿಗ್ಗಾವಿ: ಶಿಗ್ಗಾವಿ -ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಅಬ್ಬರದ ಪ್ರಚಾರ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ ಮಹಾಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್. ಕಳೆದ ಐದು ದಿನಗಳಿಂದ ಬೀಡು ಬಿಟ್ಟಿರುವ ಸಚಿವರು, ಪ್ರತಿದಿನ ಏಳೆಂಟು ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ವಿಶೇಷವಾಗಿ ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಚಿವರು ಹೋದ ಕಡೆಯಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ಗೃಹಲಕ್ಷ್ಮೀ ಯೋಜನೆಯ ರೂವಾರಿ ಮಿನಿಸ್ಟರ್ ಬಂದಿದ್ದಾರೆ ಎಂದು ಹೇಳಿ ಆರತಿ ಬೆಳಗಿ ಸ್ವಾಗತಿಸುವುದು ಸಾಮಾನ್ಯವಾಗಿತ್ತು.
ನಮಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಕೊಡೋ ಮಿನಿಸ್ಟರ್ ಇವರೇ. ಇವರೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎನ್ನುತ್ತ ಮಹಿಳೆಯರು, ಮಕ್ಕಳು ಮುಗಿಬೀಳುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ ಬರೋ ಎರಡು ಸಾವಿರ ರೂಪಾಯಿ ನಮಗೆ ಎಷ್ಟೋ ನೆಮ್ಮದಿ ತಂದಿದೆ ಎಂದು ಮಹಿಳೆಯರು ಸಚಿವರ ಬಳಿ ಹೇಳಿಕೊಳ್ಳುವುದು ಸಾಮಾನ್ಯವಾಗಿದೆ.
ಕುಂದೂರು ಜಿಲ್ಲಾ ಪಂಚಾಯತ್ ಉಸ್ತುವಾರಿ ವಹಿಸಿಕೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕುಂದೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹೋತನಹಳ್ಳಿ ಗ್ರಾಮದಲ್ಲಿ ನವೆಂಬರ್ 6 ರಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೂಡಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡರು. ಅದೇ ದಿನ ಶಿಗ್ಗಾವಿಯಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿದರು.
ನವೆಂಬರ್ 7 ರಂದು ಹನುಮರಹಳ್ಳಿ, ಕಂಕನವಾಡ, ಚಿಕ್ಕ ನೆಲ್ಲೂರು, ಚಾಖಾಪುರ್, ಕುಂದೂರಿನ ಗುಡ್ಡದ ಚನ್ನಾಪುರ, ಹಾವಣಗಿ ಓಣಿ, ನವೆಂಬರ್ 8 ರಂದು
ಮೂಕಬಸರೀಕಟ್ಟಿ, ನಾರಾಯಣ್ ಪುರ್, ಸದಾಶಿವ ಪೇಟ, ಬಾಡಾ, ಹಳೇ ಬಂಕಾಪುರ, ನವೆಂಬರ್, ನವೆಂಬರ್ 9 ರಂದು ಕಲ್ಯಾಣ, ಕುರ್ಸಾಪೂರ, ಚಿಕ್ಕ ನೆಲ್ಲೂರು, ಹಿರೇಮಲ್ಲೂರು ಗ್ರಾಮಗಳಲ್ಲಿ ಎರಡರಿಂದ ಮೂರು ಪ್ರಚಾರ ಸಭೆಗಳನ್ನು ಮಾಡುವ ಮೂಲಕ ಮತದಾರರನ್ನು ಹುರಿದುಂಬಿಸಿದರು. ಭಾನುವಾರ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೂಡಿ ಶಿಗ್ಗಾವಿಯಲ್ಲಿ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡರು.
ಸೆಲ್ಫಿಗೆ ಮುಗಿಬಿದ್ದ ಜನತೆ
ಸಚಿವರು ಹೋದ ಕಡೆಯಲ್ಲೆಲ್ಲಾ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸುತ್ತಿರುವ ಸಚಿವರು, ಸೆಲ್ಫಿ ಕೇಳಿದ ಮಹಿಳೆಯರಿಗೆ ನಿರಾಸೆ ಮಾಡುತ್ತಿರಲಿಲ್ಲ. ಜೊತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತಾ ಇದ್ಯಾ, ನಿಮಗೆ ಉಪಯೋಗ ಆಗುತ್ತಿದ್ಯಾ ಎಂದು ಕೇಳುವ ಮೂಲಕ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಇತಿಹಾಸ ಹಾಗೂ ಜನ ಸಾಮಾನ್ಯರಿಗೆ, ಬಡವರಿಗೆ ನೀಡಿರುವ ಕೊಡುಗೆ, ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ತಮ್ಮ ಭಾಷಣದಲ್ಲಿ ವಿವರಿಸುವ ಮೂಲಕ ಮತದಾರರ ಗಮನ ಸೆಳೆದರು. ಸಚಿವರು ಪ್ರಚಾರ ಸಭೆಗೆ ಬರುವವರೆಗೂ, ರಾತ್ರಿಯಾದರೂ ಮಹಿಳೆಯರು ಕಾದು ಕುಳಿತಿರುತ್ತಿದ್ದರು. ಜೊತೆಗೆ ಒಂದು ನಿಮಿಷ ನಮ್ ಮನೆಗೆ ಬಂದ್ ಹೋಗ್ರಿ ಎಂದು ಸಚಿವರನ್ನು ತಮ್ಮ ಮನೆಗೆ ಆಹ್ವಾನಿಸುತ್ತಿದ್ದರು. ಗ್ರಾಮಕ್ಕೆ ಬಂದ ಗೃಹಲಕ್ಷ್ಮೀ ಯೋಜನೆಯ ರೂವಾರಿ ಲಕ್ಷ್ಮೀ ಅಕ್ಕನಿಗೆ ಜೈ ಎಂದು ಜೈಕಾರ ಹಾಕುವ ಮೂಲಕ ಸಚಿವರನ್ನು ಬರಮಾಡಿಕೊಳ್ಳುತ್ತಿದ್ದರು.
ವರಿಷ್ಠರು ನೀಡಿದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಸಚಿವರು, ಮತದಾರರನ್ನು ಅದರಲ್ಲೂ ಮಹಿಳೆಯರ ಗಮನಸೆಳೆಯುವಲ್ಲಿ ಯಶಸ್ವಿಯಾದರು. ಜನರು ಅವರಿಗೆ ತೋರುತ್ತಿರುವ ಪ್ರೀತಿ ಯಾವ ಫಿಲ್ಮ್ ಸ್ಟಾರ್ ಗಳಿಗೂ ಕಡಿಮೆ ಇಲ್ಲ.