ಅಂಬಿಕಾ ಮಹಾವಿದ್ಯಾಲಯದಲ್ಲಿ ರಾಜ್ಯೋತ್ಸವ ಸ್ಪರ್ಧೆ ವಿಜೇತರಿಗೆ ಬಹುಮಾನ; ಕನ್ನಡದ ಸೊಬಗನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು : ಸತೀಶ ಇರ್ದೆ-ಕಹಳೆ ನ್ಯೂಸ್
ಪುತ್ತೂರು: ಕನ್ನಡದ ಸೊಬಗನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಭಾಷೆಯ ಬಗೆಗೆ ಭಾವನೆಗಳು ಮಿಡಿದಾಗ ಅದು ಅಂತರAಗಕ್ಕೆ ತಲಪುವುದಕ್ಕೆ ಸಾಧ್ಯ. ಕನ್ನಡವನ್ನು ಬಳಸುವ, ಬೆಳೆಸುವ ಹೊಣೆಗಾರಿಕೆ ಯುವಸಮುದಾಯದ ಮೇಲಿದೆ. ಕನ್ನಡದ ಪದಗಳು ನಮ್ಮ ನಿತ್ಯಬಳಕೆಯಲ್ಲಿ ನಿರಂತರವಾಗಿ ಜಾರಿಯಲ್ಲಿದ್ದಾಗ ಮಾತ್ರ ಭಾಷೆ ಅಭಿವೃದ್ಧಿ ಕಾಣುವುದಕ್ಕೆ ಸಾಧ್ಯ ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಕನ್ನಡದ ಬಗೆಗೆ ಮಂಗಳವಾರ ಉಪನ್ಯಾಸ ನೀಡಿದರು.
ಆಧುನಿಕ ದಿನಮಾನಗಳಲ್ಲಿ ಹೆತ್ತವರನ್ನು ಅಪ್ಪ ಅಮ್ಮ ಎಂದು ಗುರುತಿಸುವುದಕ್ಕೂ ಗೊತ್ತಿರದೆ ಮಮ್ಮಿ ಡ್ಯಾಡಿ ಎಂದಷ್ಟೇ ತಿಳಿದಿರುವ ಮಕ್ಕಳಿದ್ದಾರೆ. ಇದು ದುರಂತ. ಭಾಷೆಯ ಬಗೆಗಿನ ನಿರ್ಲಕ್ಷö್ಯ ಇಂತಹ ಸ್ಥಿತಿಯನ್ನು ನಮಗೆ ತಂದೊಡ್ಡಿದೆ. ಇನ್ನಿತರ ಭಾಷೆ ನಮಗೆ ಬೇಡ ಎಂದಲ್ಲ, ಆದರೆ ನಮ್ಮ ಭಾಷೆಯನ್ನು ಮರೆತು ಪರಭಾಷೆಗೆ ಮಾರುಹೋಗುವ ಸಂದರ್ಭವನ್ನು ಸೃಷ್ಟಿಸಿಕೊಳ್ಳಬಾರದು. ಕನ್ನಡದ ಸೊಗಸು ಅನುಭವಿಸಿದಾಗ ಮಾತ್ರ ಅರ್ಥವಾಗುವುದಕ್ಕೆ ಸಾಧ್ಯ. ಯಕ್ಷಗಾನ-ತಾಳಮದ್ದಳೆಗಳು ಇಂದು ಶುದ್ಧ ಕನ್ನಡವನ್ನು ಉಳಿಸುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಭಾಷೆಯ ಬಗೆಗೆ ಅಪರಿಮಿತ ಪ್ರೀತಿ ಇರಬೇಕು. ಕನ್ನಡ ಬರುವುದಿಲ್ಲ ಎನ್ನುವುದು ಗೌರವದ ಸಂಕೇತವಲ್ಲ. ದಾರಿದ್ರö್ಯದ ಲಕ್ಷಣ. ಇಂದು ಅನೇಕ ಹೆತ್ತವರು ತಮ್ಮ ಮಕ್ಕಳಿಗೆ ಆಂಗ್ಲ ಭಾಷೆ ಗೊತ್ತಿರುವುದನ್ನು ಹಾಗೂ ಕನ್ನಡ ತಿಳಿಯದಿರುವುದನ್ನು ಹೆಮ್ಮೆಯ ಸಂಗತಿ ಅಂದುಕೊಳ್ಳುತ್ತಿದ್ದಾರೆ. ಆದರೆ ಇದು ಮೂರ್ಖತನದ ಪ್ರತೀಕ. ಕನ್ನಡ ನಾಡಿನಲ್ಲಿದ್ದು ಇನ್ನಿತರ ಭಾಷೆ ಗೊತ್ತಿರದಿದ್ದರೆ ಅದು ಅವಮಾನವಲ್ಲ, ಕನ್ನಡ ತಿಳಿಯದಿದ್ದರೆ ಅವಮಾನ ಎಂದರು.
ಆಡುವ ಕನ್ನಡ ಮಾತಿನಲ್ಲಿ ಒಂದೆರಡು ಪರಭಾಷೆಯ ಶಬ್ದಗಳು ಬಂದರೂ ನಮಗದು ವಿಚಿತ್ರ ಎನಿಸುವುದಿಲ್ಲ. ಯಾಕೆಂದರೆ ಇನ್ನಿತರ ಭಾಷಾ ಶಬ್ದಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಕನ್ನಡಕ್ಕಿದೆ. ಆದರೆ ಆಂಗ್ಲಭಾಷೆಯಲ್ಲೋ, ಹಿಂದಿಯಲ್ಲೋ ಮಾತನಾಡುವಾಗ ಮಧ್ಯೆ ಮಧ್ಯೆ ಕನ್ನಡ ಪದ ಬಳಕೆ ಮಾಡಿದರೆ ಅಸಹಜವೆನಿಸುತ್ತದೆ. ಯಾಕೆಂದರೆ ಆ ಭಾಷೆಗಳಿಗೆ ಕನ್ನಡವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲ. ಹಾಗೆಂದು ಕನ್ನಡದ ಮಾತಿನಲ್ಲಿ ಶಬ್ದಗಳಲ್ಲದೆ ವಾಕ್ಯಗಳನ್ನೂ ಪರಭಾಷೆಯಲ್ಲಿ ವ್ಯಕ್ತಪಡಿಸುವುದು ಬೇಜವಾಬ್ದಾರಿಯ ಲಕ್ಷಣ ಎಂದು ತಿಳಿಸಿದರು.
ರಾಜ್ಯೋತ್ಸವದ ಪ್ರಯುಕ್ತ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ವಿಭಾಗದ ಉಪನ್ಯಾಸಕ ಗಿರೀಶ ಭಟ್ ಕೂವೆತ್ತಂಡ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಅನನ್ಯಾ ವಿ, ವಾಣಿಜ್ಯ ಉಪನ್ಯಾಸಕಿ ಶ್ರೀಕೀರ್ತನಾ, ಇಂಗ್ಲಿಷ್ ವಿಭಾಗ ಮುಖ್ಯಸ್ಥ ಗಣೇಶ ಪ್ರಸಾದ್ ಎ., ಸಂಸ್ಕೃತ ವಿಭಾಗ ಮುಖ್ಯಸ್ಥೆ ಶಶಿಕಲಾ ವರ್ಕಾಡಿ, ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶರಣ್ಯಾ ಪ್ರಾರ್ಥಿಸಿ, ವಿದ್ಯಾರ್ಥಿ ಅಕ್ಷಿತ್ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಜಯಂತಿ ಪಿ ಬಹುಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಸಾಕೇತ್ ವಂದಿಸಿ, ವಿದ್ಯಾರ್ಥಿನಿ ಮಾನ್ಯ ಕಾರ್ಯಕ್ರಮ ನಿರ್ವಹಿಸಿದರು.