ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಗ್ರಂಥಾಲಯ ಸಪ್ತಾಹ ಮತ್ತು ಪುಸ್ತಕ ಪ್ರದರ್ಶನ ಉದ್ಘಾಟನೆ-ಕಹಳೆ ನ್ಯೂಸ್
ಪುತ್ತೂರು: (ನವೆಂಬರ್ 14): “ಪುಸ್ತಕಗಳು ಮತ್ತು ಓದು ಜೀವನದ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಅದರಲ್ಲೂ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೇಮ್ ಗಳಲ್ಲಿ ಕಾಲ ಕಳೆಯುವ ಬದಲಿಗೆ ಉತ್ತಮ ಪುಸ್ತಕಗಳನ್ನು ತಮ್ಮ ಬದುಕಿನ ಒಡನಾಡಿಯನ್ನಾಗಿಸಿಕೊಳ್ಳಬೇಕು” ಎಂದು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ| ???ಂಟನಿ ಪ್ರಕಾಶ್ ಮೊಂತೇರೊರವರು ಹೇಳಿದರು.
ನವಂಬರ್ 14 ರಿಂದ ನವಂಬರ್ 20 ರವರೆಗೆ ಭಾರತದಲ್ಲಿ ಆಚರಿಸಲ್ಪಡುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಕಾಲೇಜು ಗ್ರಂಥಾಲಯದಲ್ಲಿ ನವಂಬರ್ 14 ರಿಂದ 23 ರವರೆಗೆ ಆಯೋಜಿಸಿದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಂಥಾಲಯದಲ್ಲಿ ನಮ್ಮ ಜೀವನದ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ಪುಸ್ತಕಗಳ ಆಸ್ತಿಯೇ ಇದೆ. ವಿದ್ಯಾರ್ಥಿಗಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಕ್ಷೀಣಿಸುತ್ತಿದ್ದು, ಅವರಲ್ಲಿ ಓದುವ, ಬರೆಯುವ ಕ್ರಿಯಾಶೀಲತೆಯನ್ನು ಬೆಳೆಸುವ ಸದುದ್ದೇಶದಿಂದ ಕಾಲೇಜಿನಲ್ಲಿ ನವೆಂಬರ್ ತಿಂಗಳನ್ನು “ಗ್ರಂಥಾಲಯ ತಿಂಗಳಾಗಿ” ಘೋಷಿಸಿದ್ದು, ಗ್ರಂಥಾಲಯ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ವಿಮರ್ಶೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಮತ್ತು ಹತ್ತು ದಿವಸದ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಲೆ, ಸಾಹಿತ್ಯ, ವ್ಯಕ್ತಿತ್ವ ವಿಕಸನ, ಸ್ಪರ್ಧಾತ್ಮಕ ಮತ್ತು ಆತ್ಮಚರಿತ್ರೆಗಳನ್ನೊಳಗೊಂಡಿರುವ ಸುಮಾರು 500 ಕ್ಕೂ ಮಿಕ್ಕಿದ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.