ಕುಂದಾಪುರ: ವಿವೇಚನೆ ಮಾಡುವ ಶಕ್ತಿಯನ್ನು ಭಗವಂತನು ಮನುಷ್ಯನಿಗೆ ವಿಶೇಷವಾಗಿ ನೀಡಿದ್ದಾನೆ. ದೇವರ ಆರಾಧನೆಯಿಂದ ಮನುಕುಲದ ಅಭಿವೃದ್ಧಿಯಾಗುತ್ತದೆ. ಸಾಧು ಸಂತರು ಋಷಿಮುನಿಗಳು ನೀಡಿದ ವಿಶಿಷ್ಠ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಇಂದು ಪ್ರತಿಯೊಂದು ದೇವಳವನ್ನು ಉಳಿಸುವ ಜವಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನೆಲೆಯಲ್ಲಿ ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು ದೇವತಾ ಕಾರ್ಯಗಳನ್ನು ಯಶಸ್ಸಿಗೊಳಿಸೋಣ ಎಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.
ಕುಂಭಾಸಿ ನಾಗಾಚಲ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೂತನವಾಗಿ ಶೃಂಗೇರಿ ಶಂಕರ ಮಠ ಸ್ಥಾಪಿಸುವ ನಿಮಿತ್ತ ಲೋಕಕಲ್ಯಾಣಾರ್ಥವಾಗಿ ಜರುಗಲಿರುವ ಕೋಟಿ ಮಂಗಳ ಗೌರೀ ಜಪ, ಪಂಚಾಕ್ಷರೀ ಜಪ ಯಜ್ಞದ ಸಂಕಲ್ಪದ ಜಪ ಪತ್ರಿಕೆಯನ್ನು ದೇವಳದ ಸಭಾಭವನದಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶ್ರೀ ಶೃಂಗೇರಿ ಪೀಠದ ಪ್ರಾಂತೀಯ ಧರ್ಮಧಿಕಾರಿ ವೇದಮೂರ್ತಿ ನಾಗಪಾತ್ರಿಗಳಾದ ಲೋಕೇಶ್ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ನಾಗಾಚಲ ಕ್ಷೇತ್ರವು ಮುಂದಿನ ದಿನದಲ್ಲಿ ಶೃಂಗೇರಿ ಶಂಕರ ಮಠವಾಗಲಿದೆ. ಈ ಪ್ರಯುಕ್ತ 2025ನೇ ಮಾರ್ಚ್ ತಿಂಗಳಲ್ಲಿ ಸಾಮೂಹಿಕವಾಗಿ ಸಮಸ್ತರ ಕೂಡುವಿಕೆಯಲ್ಲಿ ಶೃಂಗೇರಿ ಜಗದ್ಗುರುಗಳ ನೇತೃತ್ವದಲ್ಲಿ ಶಂಕರಾಚಾರ್ಯರು ಮತ್ತು ಶಾರದ ಅಮ್ಮನವರ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗುತ್ತದೆ.
ಈ ಸಂದರ್ಭದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವ ಪುನರ್ ಪ್ರತಿಷ್ಠಾಪನಾ ವಿಧಿ ಸೇರಿದಂತೆ ಹಲವು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿರಂತರ ಭಜನೆಯೊಂದಿಗೆ ತಾಲೂಕಿನ ಎಲ್ಲಾ ಭಜನಾ ಮಂಡಳಿಗಳಿಗೂ ಅವಕಾಶ ನೀಡಲಾಗುತ್ತದೆ. ಇದಲ್ಲದೇ ಶ್ರದ್ದೆಯಿಂದ ಎಲ್ಲ ಭಕ್ತರೂ ಕೋಟಿ ಮಂಗಳ ಗೌರೀ, ಪಂಚಾಕ್ಷರೀ ಜಪ ಯಜ್ಞ ಸಂಕಲ್ಪದ ಜಪದ ಮೂಲಕ ಲೋಕಕಲ್ಯಾಣಾರ್ಥಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ದೇವಳದ ಸಂಸ್ಥಾಪಕರಾದ ಅಮಿತಾ ಕಲ್ಲುಜ್ಜಿಕರ್ ಮತ್ತು ಅರುಣ್ ಕಲ್ಲುಜೀಕರ್, ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ವಿಠಲ ಶೆಟ್ಟಿ ಕೊರ್ಗಿ, ಕೋಟೇಶ್ವರ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ್ ಬಿ. ಕುಂಭಾಸಿ, ತಾಲೂಕು ಭಜನಾ ಒಕ್ಕೂಟದ ಗೌರವಾಧ್ಯಕ್ಷ ಜಯಕರ ಪೂಜಾರಿ ಗುಲ್ವಾಡಿ, ಶ್ರಾವಣ ಶ್ರೀ ಶಾಸ್ತಾರ ಅಯ್ಯಪ್ಪ ಮಂಡಳಿ ಅಧ್ಯಕ್ಷ ಪ್ರಕಾಶ್ ಆಚಾರ್, ನಿರೂಪಣಾ ಕಾರ್ಯದರ್ಶಿ ಜಗದೀಶ್ ಗಾಣಿಗ ಕುಂಭಾಸಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಸದಸ್ಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶ್ರೀ ಕ್ಷೇತ್ರದ ವತಿಯಿಂದ ಭಜನಾ ಮಂಡಳಿಯ ಸದಸ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ನಿತಿನ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಜಗದೀಶ್ ಗಾಣಿಗ ವಂದಿಸಿದರು.