Wednesday, November 20, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಸ್ವಾಯತ್ತ ಕಾಲೇಜಿನಲ್ಲಿ ಅಂತರ್ ಜಿಲ್ಲಾ ಮಟ್ಟದ ಪ್ರತಿಭೋತ್ಸವ ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ-ಕಹಳೆ ನ್ಯೂಸ್

ಪುತ್ತೂರು : ವ್ಯಕ್ತಿಯು ಬದುಕಿನಲ್ಲಿ ಎಲ್ಲವನ್ನು ತಿಳಿದುಕೊಂಡಿದ್ದೇನೆ ಎಂದು ಹೇಳಲು ಎಂದಿಗೂ ಸಾಧ್ಯವಿಲ್ಲ. ಮನುಷ್ಯನು ಹುಟ್ಟಿನಿಂದ ಸಾಯುವವರೆಗೆ ಕಲಿಯುವುದೇ ಆಗಿದೆ. ಜ್ಞಾನವನ್ನು ಪಡೆದುಕೊಳ್ಳುವುದು ಮಾತ್ರ ಅಂತಿಮವಲ್ಲ, ಏನು ಹೇಳಬೇಕು ಎನ್ನುವುದನ್ನು ಜ್ಞಾನ ತಿಳಿಸುತ್ತದೆ ಮತ್ತು ಹೇಗೆ ಹೇಳಬೇಕು ಎಂಬುದನ್ನು ವ್ಯಕ್ತಿತ್ವ ತಿಳಿಸುತ್ತದೆ ಮತ್ತು ಎಷ್ಟು ಹೇಳಬೇಕು ಎಂಬುದನ್ನು ತಿಳಿಸುವುದು ಕೌಶಲ್ಯವಾಗಿದೆ . ಜ್ಞಾನ ಮತ್ತು ವಿಜ್ಞಾನ ಪ್ರಪಂಚದಲ್ಲೆಡೆ ಇದೆ,ಆದರೆ ಸುಜ್ಞಾನ ಇರುವುದು ನಮ್ಮ ಭಾರತದಲ್ಲಿ ಮಾತ್ರ ಆದರಿಂದ ಭಾರತದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು ಎಂದು ಪುತ್ತೂರಿನ ಸರಕಾರಿ ಪದವಿ ಪೂರ್ವ ಕಾಲೇಜು, ಕೊಂಬೆಟ್ಟು ಇಲ್ಲಿನ ಪ್ರಾಂಶುಪಾಲ ಗೋಪಾಲ ಗೌಡ ಡಿ ಹೇಳಿದರು.

ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ಲಲಿತಕಲಾ ಸಂಘ, ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ನಡೆದ ಕಾಲೇಜಿನ ಸ್ನಾತಕ ವಿಭಾಗದ ಷಷ್ಠ್ಯಬ್ದ ಹಾಗೂ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವ ಸವಿ ನೆನಪಿಗಾಗಿ ನಡೆಯುವ ವಿವೇಕಾನಂದ ಜಯಂತಿ- 2025 ಪಿಯುಸಿ ವಿದ್ಯಾರ್ಥಿಗಳ ಅಂತರ್ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ಪ್ರತಿಭೋತ್ಸವ 2024-25 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ ಶ್ರೀಪತಿ ಕಲ್ಲೂರಾಯ, ವಿದ್ಯಾರ್ಥಿಗಳು ಓದು, ಬರಹ ಮತ್ತು ಶೈಕ್ಷಣಿಕವಾಗಿ ಗಳಿಸಿದ ಅಂಕ ಭವಿಷ್ಯಕ್ಕೆ ನಾಂದಿಯಾದರೆ, ಅವರ ಪ್ರತಿಭೆಯನ್ನು ಗುರುತಿಸಿಕೊಳ್ಳುವುದು ಬದುಕಿನ ಸಮಗ್ರತೆಗೆ ನಾಂದಿಯಾಗುತ್ತದೆ. ನಿಮ್ಮಲ್ಲಿರುವ ಪ್ರತಿಭೆ ಮತ್ತು ಸ್ಪರ್ಧಾತ್ಮಕ ಮನೋಭಾವ ಎಂಬ ಎರಡು ಸೂಕ್ಷ್ಮವನ್ನು ಗಮನಿಸಿ ಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದರೆ ನೀವು ಯಶಸ್ವಿ ಪ್ರತಿಭಾವಂತರಾಗುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರೋಪ ಸಮಾರಂಭ ವಿದ್ಯಾರ್ಥಿ ಜೀವನದಲ್ಲಿ ಪದವಿ ಪೂರ್ವ ಶಿಕ್ಷಣವೆಂಬುದು ಕ್ಷಣಾರ್ಧದಲ್ಲಿ ಕಳೆದು ಹೋಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಗಮನಹರಿಸಬೇಕು ಹಾಗೂ ಆಸಕ್ತ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಉನ್ನತ ಸ್ಥಾನವನ್ನು ಪಡೆಯುವತ್ತ ಚಿಂತನೆ ನಡೆಸಬೇಕು ಎಂದು ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಇಂದ್ರಪ್ರಸ್ಥ ಕಾಲೇಜು ಉಪ್ಪಿನಂಗಡಿ ಇದರ ಪ್ರಾಂಶುಪಾಲ ಪ್ರೊ .ಎಚ್ ಕೆ ಪ್ರಕಾಶ್ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ. ಕೆ . ಎನ್ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ತುಂಬಾ ಮುಖ್ಯ ಹಾಗೂ ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಸಮಾಜದಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಮತ್ತು ಮನೋಬಲವನ್ನು ಹೆಚ್ಚಿಸುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಶೀಷ್ ಆಳ್ವ, ಹಾಗೂ ಕರ‍್ಯದರ್ಶಿ ನಿಖಿಲ್ ಸ್ವಾಗತಿಸಿ, ಐಕ್ಯೂಎಸಿ ಘಟಕದ ಸಂಯೋಜಕ ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಿವಪ್ರಸಾದ್ ಕೆ.ಎಸ್ ವಂದಿಸಿ, ಪ್ರಥಮ ಕಲಾವಿಭಾಗದ ವಿದ್ಯಾರ್ಥಿನಿ ಚೈತನ್ಯ ಹಾಗೂ ಅವನಿ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ನಂತರ ಸುಮಾರು 28 ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 530 ವಿದ್ಯಾರ್ಥಿಗಳು ಭಾಗವಹಿಸಿದರು.

ಸ್ಫರ್ಧೆಯಲ್ಲಿ ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು, ವಿವೇಕಾನಂದ ಪದವಿಪೂರ್ವ ಕಾಲೇಜು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.