ಪಕ್ಷದಲ್ಲಿ ಎರೆಹುಳುಗಳು ನಾಗರಹಾವುಗಳಾಗುತ್ತಿದ್ದಾರೆ : ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ವಾಗ್ದಾಳಿ – ಕಹಳೆ ನ್ಯೂಸ್
– ರಾಜ್ಯ ಬಿಜೆಪಿ ಭಿನ್ನಮತ ಕೈಮೀರಿ ಹೋಗಿದೆ
– ಇಗೋ ಸಮಸ್ಯೆಯಿಂದ ಪಕ್ಷಕ್ಕೆ ಭಾರೀ ಹಾನಿ
ಬೆಂಗಳೂರು: ಕಾಂಗ್ರೆಸ್‌ನವರು (Congress) ಚಿನ್ನದ ಬಟ್ಟಲುಗಳಿಂದ ವಿಷಯಗಳನ್ನು ಕೊಡುತ್ತಿದ್ದರೂ ನಮ್ಮವರು ತೆಗೆದುಕೊಳ್ಳಲು ಆಗುತ್ತಿಲ್ಲ. ಪಕ್ಷದಲ್ಲಿ ಎರೆಹುಳುಗಳು ನಾಗರಹಾವುಗಳಾಗುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ (DV Sadananda Gowda) ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯಲ್ಲಿ (BJP) ಆಂತರಿಕ ಜಗಳವೇ ಆಯ್ತು.ಇವರಿಂದ ಸರ್ಕಾರವನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಜನರು ಮಾತನಾಡುತ್ತಿದ್ದಾರೆ. ಇಗೋ ಸಮಸ್ಯೆಯಿಂದ ಬಿಜೆಪಿಗೆ ದೊಡ್ಡ ಹಾನಿಯಾಗುತ್ತಿದೆ. ಇಷ್ಟೆಲ್ಲಾ ಪಕ್ಷದಲ್ಲಿ ಆಗುತ್ತಿರುವ ರಾದ್ದಾಂತವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ಇನ್ನೊಮ್ಮೆ ನಾನು ದೆಹಲಿಗೆ ಹೋಗುವ ನಿರ್ಧಾರ ಮಾಡಿದ್ದೇನೆ. ಡಿಸೆಂಬರ್ 3 ರಂದು ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಇದರ ಬಗ್ಗೆ ಚರ್ಚಿಸಿ ಇದಕ್ಕೆಲ್ಲ ಬ್ರೇಕ್ ಹಾಕುವಂತೆ ಹೈಕಮಾಂಡ್‌ಗೆ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.
ಕರ್ನಾಟಕ ಬಿಜೆಪಿ ಬಗ್ಗೆ ನಾನು ವರಿಷ್ಠರಿಗೆ ಎರಡು ಪತ್ರ ಬರೆದಿದ್ದೇನೆ. ನಾನು ಅಧ್ಯಕ್ಷ ಇದ್ದಾಗಲೂ ಇದಕ್ಕಿಂತ ದೊಡ್ಡ ಗುಂಪುಗಳಿದ್ದವು. ಪಕ್ಷದ ಕಟ್ಟಿದ್ದು ನಾವು ಅಂತ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಗುಂಪು ಪ್ರಬಲವಾಗಿ ಸೆಣಸಾಡುತ್ತಿದ್ದವು. ಆದರೆ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಗುಂಪು ಯಾವತ್ತೂ ಬೀದಿಗೆ ಇಳಿದಿರಲ್ಲ ಎಂದರು.
ನೀವು ಇಲ್ಲಿ ಬೀದಿಗೆ ಹೋಗುವ ಬದಲು ದೆಹಲಿಗೆ ವಿಮಾನ ಹತ್ತಿ ಹೋಗಿ. ದೆಹಲಿಯಲ್ಲಿ ನಮ್ಮ ಅದ್ಭುತ ನಾಯಕರು ಇದ್ದಾರೆ. ದೆಹಲಿಗೆ ಹೋಗಿ ಪಕ್ಷದ ವಿಚಾರ ಹೇಳಿ ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ನೀವೆಲ್ಲ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಎಂದು ಕರೆಸಿಕೊಳ್ಳಲು ನಾಲಾಯಕ್ ಎಂದು ವಿಜಯೇಂದ್ರ, ಯತ್ನಾಳ್ ತಂಡಕ್ಕೆ ಡಿವಿಎಸ್ ಕಿವಿಮಾತು ಹೇಳಿದರು.
ನಾವು ಹಿರಿಯರು ಸೇರಿಕೊಂಡು ಒಂದು ಸಭೆ ಕರೆಯಬೇಕು. ಎರಡೂ ಗುಂಪುಗಳನ್ನು ಕರೆದು ಮಾತಾಡಬೇಕು ಅಂತ ನಮ್ಮ ಮನಸ್ಸಿನಲ್ಲಿತ್ತು. ಆದರೆ ಅವರು ಯಾವಾಗ ಬೀದಿಗೆ ಇಳಿದರೋ ಆಗ ಇದು ನಮ್ಮ ಕೈಯಲ್ಲಿ ಆಗದ ಕೆಲಸ ಅಂತ ಗೊತ್ತಾಯ್ತು. ಬಿಜೆಪಿ ಭಿನ್ನಮತ ರಾಜ್ಯದ ಹಿರಿಯರ ಕೈಮೀರಿ ಹೋಗಿದೆ ಎಂದು ತಿಳಿಸಿದರು.