ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು ಎಂದಿದ್ದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್‌ಐಆರ್ – ಕಹಳೆ ನ್ಯೂಸ್
ಬೆಂಗಳೂರು: ಮುಸ್ಲಿಮರಿಗೆ (Muslims) ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಕರೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ (Vokkaliga seer Chandrashekar Swamiji ) ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸೈಯ್ಯದ್ ಅಬ್ಬಾಸ್ ಎಂಬವರು ಸ್ವಾಮೀಜಿ ವಿರುದ್ಧ ದೂರು ನೀಡಿದ್ದು ಬಿಎನ್‌ಎಸ್ ಸೆಕ್ಷನ್ 299 (ಯಾವುದೇ ಧರ್ಮವನ್ನು ಅಪಮಾನಗೊಳಿಸಿ ಅವರ ಧಾರ್ಮಿಕ ಭಾವನೆಗಳಿಗೆ ಆಘಾತ ಉಂಟುಮಾಡುವ ಉದ್ದೇಶದಿಂದ ಬುದ್ಧಿಪೂರ್ವಕವಾಗಿ ಮತ್ತು ದ್ವೇಷ ಭಾವನೆಯಿಂದ ಮಾಡಿದ ಕೃತ್ಯ) ಅಡಿ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಭಾರತ ದೇಶದ ಪ್ರಜೆಗಳಾದ ನಾವು, ಸಂವಿಧಾನ ಬದ್ದರಾಗಿ ಈ ದೇಶದಲ್ಲಿ ಜೀವನ ಮಾಡುತ್ತಿದ್ದೇವೆ. ಆದರೆ ಚಂದ್ರಶೇಖರ ಸ್ವಾಮೀಜಿ ಅವರು ಮುಸ್ಲಿಂ ಧರ್ಮದವರನ್ನು ಗುರಿಯಾಗಿಸಿಕೊಂಡು ಅವರ ಭಾವನೆಗಳಿಗೆ ನೋವುಂಟಾಗುವಂತೆ ಮತ್ತು ಎಲ್ಲಾ ಮುಸ್ಲಿಂ ಜನಾಂಗದವರನ್ನು ಶತ್ರು ದೇಶದವರಿಗೆ ಹೋಲಿಸಿ ಮಾತನಾಡುವ ಮೂಲಕ ಜನರಿಗೆ ಅವಮಾನ ಮಾಡಿರುತ್ತಾರೆ. ಜಾತಿ ಜಾತಿಗಳ ನಡುವೆ ಮತೀಯ ದ್ವೇಷ, ವೈರತ್ವ, ವೈಮನಸ್ಸು ಹುಟ್ಟುವಂತೆ ಪ್ರಚೋದಿಸಿ, ಪ್ರಚೋದನಕಾರಿ ಭಾಷಣ ಮಾಡಿರುವ ಶ್ರೀ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.
ಚಂದ್ರಶೇಖರ ಸ್ವಾಮೀಜಿ ಹೇಳಿದ್ದು ಏನು?
ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ್ದ ಅವರು ಪಾಕಿಸ್ತಾನದಲ್ಲಿ ಬೇರೆಯವರಿಗೆ ಮತ(Vote) ಹಾಕುವ ಅಧಿಕಾರವಿಲ್ಲ. ಅದೇ ರೀತಿ ನಮ್ಮ ಭಾರತದಲ್ಲಿಯೂ ಮುಸ್ಲಿಮರಿಗೆ ಮತದಾನ ಮಾಡುವ ಹಕ್ಕಿಲ್ಲದಂತೆ ಮಾಡಿದರೆ ಅವರು ಅವರ ಪಾಡಿಗಿರುತ್ತಾರೆ. ಖಂಡಿತವಾಗಿಯೂ ಎಲ್ಲರೂ ನೆಮ್ಮದಿಯಾಗಿ ಇರಲು ಸಾಧ್ಯ.
ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು. ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಿದರೆ ಆಗ ಭಾರತೀಯರೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗಲಿದೆ. ರೈತರ ಜಮೀನು ಉಳಿಸಲು ಎಲ್ಲರೂ ಒಂದಾಗಿ ಹೋರಾಟ ನಡೆಸುವ ತುರ್ತು ಸಂದರ್ಭ ಎದುರಾಗಿದೆ. ಸರ್ಕಾರ ಹೋದರೂ ತೊಂದರೆ ಇಲ್ಲ. ವಕ್ಫ್ ಮಂಡಳಿ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.