ಮೂಡಬಿದಿರೆ: ನಕಲಿ ಫೇಸ್ಬುಕ್ ಖಾತೆಗಳ ಮೂಲಕ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವಂಥ ಸಂದೇಶಗಳನ್ನು ರವಾನಿಸುವ ಜತೆಗೆ ಉದ್ಯಮಿಯೋರ್ವರಿಗೆ ಕೊಲೆ ಬೆದರಿಕೆ ಒಡ್ಡಿರುವ ಆರೋಪಿ ಸುಳ್ಯ ತಾಲೂಕಿನ ಬೆಳ್ಳಾರೆ ಮುರಳಿ ಗ್ರಾಮದ ಇಬ್ರಾಹಿಂ ಖಲೀಲ್ನನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ ಈತನ ವಿರುದ್ಧ ನಾಲ್ಕು ತಿಂಗಳ ಹಿಂದೆ ಪ್ರಕರಣ ದಾಖಲಾಗಿತ್ತು.
ಅಬುಧಾಬಿಯಲ್ಲಿ ಉದ್ಯೋಗದಲ್ಲಿದ್ದ ಆತ ಫೇಸ್ಬುಕ್ನಲ್ಲಿ ಹಲವು ನಕಲಿ ಖಾತೆಗಳನ್ನು ತೆರೆದು ಕೋಮು ಸಂಘರ್ಷ ಸಹಿತ ನಿಂದನೆಗಳ ಸಂದೇಶ ಸಾರುತ್ತಿದ್ದ. ಸುಳ್ಯದಲ್ಲಿ ವ್ಯಾಪಾರಿಯಾಗಿದ್ದು ಮೂಡಬಿದಿರೆಯಲ್ಲೂ ಅಂಗಡಿ ಹೊಂದಿರುವ ಅಬ್ದುಲ್ ಲತೀಫ್ಗೆ ಕೊಲೆ ಬೆದರಿಕೆಯೊಡ್ಡಿದ್ದ ಆರೋಪವೂ ಖಲೀಲ್ ಮೇಲಿದೆ.
ಕಳೆದ ಜು. 25ರಂದು ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಇಬ್ರಾಹಿಂ ಖಲೀಲ್ ವಿದೇಶ ದಲ್ಲಿದ್ದುದರಿಂದ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.
ಆತ ರಜೆಯಲ್ಲಿ ಅ.31ರಂದು ಊರಿಗೆ ಬಂದಿರುವುದರ ಸುಳಿವು ದೊರೆತ ಮೂಡಬಿದಿರೆ ಪೊಲೀಸರು ಸುಳ್ಯದ ಆತನ ಮನೆಯಿಂದ ಬಂಧಿಸಿ ಮೂಡಬಿದಿರೆ ಠಾಣೆಗೆ ಕರೆತಂದರು. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.