ಮದರಸಾದಲ್ಲಿ ಮಧ್ಯರಾತ್ರಿ ವಿದ್ಯಾರ್ಥಿಯ ಖಾಸಗಿ ಭಾಗಕ್ಕೆ ಎಣ್ಣೆ ಹಚ್ಚಿ ಅಸಹಜ ಲೈಂಗಿಕ ದೌರ್ಜನ್ಯ : ಮದರಸಾದ ಟ್ರಸ್ಟಿ, ವಿಕೃತ ಕಾಮುಕರ ವಿರುದ್ದ ಪ್ರಕರಣ ರದ್ದು ಪಡಿಸಲು ಹೈಕೋರ್ಟ್ ನಕಾರ – ಕಹಳೆ ನ್ಯೂಸ್
“ಮದರಸಾದಲ್ಲಿ ಕಲಿಯುತ್ತಿದ್ದ 11 ವರ್ಷದ ಬಾಲಕನ ಮೇಲೆ ಅದೇ ಮದರಸಾದ ಇಬ್ಬರು ಶಿಕ್ಷಕರು ಅಸಹಜ ಸಂಭೋಗ ನಡೆಸಿದ್ದಾರೆ” ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮದರಸಾದ ಸಂಸ್ಥಾಪಕ ಟ್ರಸ್ಟಿಯ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಬೆಂಗಳೂರಿನ ಪೈಜಾನ್ ಮಾಣಿಕ್ ಮಸ್ತಾನ್ ಮದರಸಾದ ಟ್ರಸ್ಟಿ ಮೊಹಮದ್ ಅಮೀರ್ ರಾಜಾ ಅವರು ತನ್ನ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
“ಈ ಪ್ರಕರಣದಲ್ಲಿ ವಿದ್ಯಾರ್ಥಿಯ ಮೇಲೆ ಶಿಕ್ಷಕರು ನಡೆಸಿರುವ ದೌರ್ಜನ್ಯ ಆಘಾತಕಾರಿಯಾಗಿದೆ. ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಕಾಯಿದೆ ವ್ಯಾಪ್ತಿಗೆ ಒಳಪಡುವ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಸಮಾಜ ತತ್ತರಿಸುತ್ತದೆ” ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.
“ಎಷ್ಟೋ ಬಾರಿ ಈ ರೀತಿಯ ಘೋರ ಅಪರಾಧ ಕೃತ್ಯಗಳು ಮಾಹಿತಿಯ ಕೊರತೆಯಿಂದ ಮುಚ್ಚಿ ಹೋಗುತ್ತವೆ. ಅಂತೆಯೇ, ಕಿರುಕುಳಕ್ಕೆ ಒಳಗಾದ ಸಂತ್ರಸ್ತರೂ ದೂರು ದಾಖಲಿಸಲು ಮುಂದಾಗುವುದಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ಟ್ರಸ್ಟಿ ಅಪರಾಧ ಕೃತ್ಯದ ಬಗ್ಗೆ ತಮಗೆ ಮಾಹಿತಿ ದೊರೆತ ತಕ್ಷಣ ದೂರು ದಾಖಲಿಸದೆ ಇರುವುದು ಒಪ್ಪತಕ್ಕದ್ದಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.
“ಅರ್ಜಿದಾರ ಮೊಹಮದ್ ಅಮೀರ್ ರಾಜಾ ಮದರಸಾದ ಸಂಸ್ಥಾಪಕ ಟ್ರಸ್ಟಿ. ಮದರಸಾದ ಒಳಗೆ ಏನು ನಡೆಯುತ್ತಿದೆ ಎಂಬ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದವರು. ವಿಷಯ ಅರಿವಿಗೆ ಬಂದ ಮೇಲೂ ಅವರು ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗಿಲ್ಲ. ಇದೇ ಕಾರಣದಿಂದ ಆರೋಪಿತ ಶಿಕ್ಷಕರು ಸಂತ್ರಸ್ತ ಬಾಲಕನಿಗೆ ಪದೇ ಪದೇ ಕಿರುಕುಳ ನೀಡಿದ್ದಾರೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು” ಎಂದು ಪ್ರಾಸಿಕ್ಯೂಷನ್ ವಕೀಲ ಹರೀಶ್ ಗಣಪತಿ ಮಂಡಿಸಿದ್ದ ವಾದವನ್ನು ಪೀಠ ಪುರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ: ತನ್ನ 11 ವರ್ಷದ ಮಗ ಬೆಂಗಳೂರಿನ ಪೈಜಾನ್ ಮಾಣಿಕ್ ಮಸ್ತಾನ್ ಮದರಸಾದಲ್ಲಿ ಕಲಿಯುತ್ತಿದ್ದನು. ಅಲ್ಲೇ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದನು. ಇದ್ದಕ್ಕಿದ್ದಂತೆ ಆತ ಮದರಾಸದಲ್ಲಿ ಓದಲು ಇಷ್ಟವಿಲ್ಲ ಎಂದು ಅಲ್ಲಿಂದ ವಾಪಸಾಗಿದ್ದನು. ಕಲಿಯಲು ಇಷ್ಟವಿಲ್ಲ ಎಂಬ ಕಾರಣಕ್ಕೆ ಸುಳ್ಳು ಹೇಳುತ್ತಿರಬಹುದು ಎಂದು ತಾನು ಮತ್ತು ಪತ್ನಿ ಭಾವಿಸಿದ್ದೆವು. ನಂತರ ಕೂಲಂಕಷವಾಗಿ ವಿಚಾರಿಸಿದಾಗ ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಮಗೆ ಗೊತ್ತಾಗಿದೆ” ಎಂದು ಮಗುವಿನ ತಂದೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮದರಸಾದ ಇಬ್ಬರು ಶಿಕ್ಷಕರು 2023ರ ಜೂನ್‌ನಿಂದ ಸೆಪ್ಟೆಂಬರ್ 29ರ ನಡುವೆ ಹಲವು ಬಾರಿ ಮಧ್ಯರಾತ್ರಿಯಲ್ಲಿ ಮಗುವಿನೊಂದಿಗೆ ಅಸಹಜ ಸಂಭೋಗ ನಡೆಸಿರುತ್ತಾರೆ. ಶಿಕ್ಷಕರಾದ ಇಂತೆಕಾಬ್, ಶಕೀಲ್ ಅಹಮದ್ ಅವರೇ ಅಸಹಜ ಲೈಂಗಿಕ ಕ್ರಿಯೆ ನಡೆಸಿರುವ ಅನುಮಾನವಿದೆ. ಆದ್ದರಿಂದ, ಇವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಂತೆಯೇ, ಈ ಅಪರಾಧಿಕ ವಿಷಯವನ್ನು ಮುಚ್ಚಿಟ್ಟಿದ್ದ ಮದರಸಾದ ಪ್ರಾಂಶುಪಾಲ ಅಬ್ದುಲ್ ಖಾದರ್ ಮತ್ತು ಟ್ರಸ್ಟಿ ಮೊಹಮದ್ ಅಮೀರ್ ರಾಜ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.
ಇದರನ್ವಯ ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರ ಆರೋಪಿಯ ವಿರುದ್ಧ ಪೋಕ್ಸೊ ಕಾಯಿದೆಯ ಸೆಕ್ಷನ್ 17 (ಕೃತ್ಯಕ್ಕೆ ಪ್ರಚೋದನೆ) ಮತ್ತು 21 (ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸುವಲ್ಲಿ ವಿಫಲವಾದದ್ದಕ್ಕೆ ಶಿಕ್ಷೆ) ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 506ರ (ಕ್ರಿಮಿನಲ್ ಬೆದರಿಕೆ) ಅಡಿ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.